ಬಿಜೆಪಿ ಮುಖಂಡನ ಪುತ್ರ ಕಾರ್ತಿಕ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್- ಸಹೋದರಿ, ಆಕೆಯ ಪ್ರಿಯಕರನಿಂದಲೇ ಕೊಲೆ

ಮಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಮಂಗಳೂರಿನ ಬಿಜೆಪಿ ಮುಖಂಡನ ಪುತ್ರ ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.

ಪ್ರಕರಣ ಸಂಬಂಧಿಸಿ ಎಸಿಪಿ ವೆಲೆಂಟೈನ್ ಡಿಸೋಜ ನೇತೃತ್ವದ ವಿಶೇಷ ತಂಡ ಇದೀಗ ಕಾರ್ತಿಕ್ ಸೋದರಿ ಕಾವ್ಯ ಮತ್ತು ಆಕೆಯ ಪ್ರಿಯಕರ ಗೌತಮ್ ಎಂಬಾತನನ್ನು ಬಂಧಿಸಿದೆ. ಕಾವ್ಯಗೆ ಮದುವೆಯಾಗಿದ್ದು ಗಂಡ ವಿದೇಶದಲ್ಲಿದ್ದ. ಆದರೆ ಕಾವ್ಯ ಈ ವೇಳೆ ಪ್ರಿಯಕರ ಗೌತಮ್ ಜೊತೆ ಅಫೇರ್ ಇಟ್ಟುಕೊಂಡಿದ್ದನ್ನು ತಿಳಿದ ಕಾರ್ತಿಕ್ ವಿರೋಧ ವ್ಯಕ್ತಪಡಿಸಿದ್ದ.

ಇದೇ ಕಾರಣಕ್ಕೆ ಕಳೆದ ಅಕ್ಟೋಬರ್ 24 ರಂದು ಬೆಳಗ್ಗೆ ಕಾರ್ತಿಕ್ ಜಾಗಿಂಗ್ ಹೋಗುತ್ತಿದ್ದ ವೇಳೆ ಗೌತಮ್ ಮತ್ತು ಆತನ ತಮ್ಮ ಗೌರವ್ ಸೇರಿ ರಾಡ್‍ನಿಂದ ಬಡಿದು ಕೊಲೆಗೆ ಯತ್ನಿಸಿದ್ದರು. ಎರಡು ದಿನಗಳ ಬಳಿಕ ಕಾರ್ತಿಕ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಕಾರ್ತಿಕ್ ಸಾವಿಗೂ ಕೆಲ ಸಮಯದ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದರು.

ಆದರೆ ಕೊಣಾಜೆ ಠಾಣೆಯ ಮುಂಭಾಗದಲ್ಲೇ ಈ ಘಟನೆ ನಡೆದಿದ್ದರೂ ಪೊಲೀಸರು ಆರೋಪಿಗಳ ಪತ್ತೆ ಮಾಡದೇ ಇರುವುದು ಸಂಶಯಕ್ಕೆ ಕಾರಣವಾಗಿತ್ತು. ಹೀಗಾಗಿ ಯಾರೋ ದುಷ್ಕರ್ಮಿಗಳು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿ ಉದ್ದೇಶಪೂರ್ವಕವಾಗಿ ಕೊಲೆ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿತ್ತು. ಹೀಗಾಗಿ ತನಿಖೆಯನ್ನು ಪೊಲೀಸ್ ಕಮಿಷನರ್ ವಿಶೇಷ ತಂಡಕ್ಕೆ ವಹಿಸಿದ್ದರು.

ಕಾರ್ತಿಕ್ ರಾಜ್ ಮಾಜಿ ತಾಪಂ ಉಪಾಧ್ಯಕ್ಷ ಉಮೇಶ್ ಗಾಣಿಗ ಎಂಬವರ ಪುತ್ರನಾಗಿದ್ದು ಕೊಲೆ ಪ್ರಕರಣ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು.

You might also like More from author

Leave A Reply

Your email address will not be published.

badge