Tuesday, 12th December 2017

Recent News

ಮಳೆ ನೀರಲ್ಲಿ ಕೊಚ್ಚಿ ಹೋದ ಬೈಕ್ ಸವಾರ- ಡ್ರಾಪ್ ಕೇಳಿ ಹಿಂದೆ ಕುಳಿತಿದ್ದ ವ್ಯಕ್ತಿ ಪಾರು

ಗದಗ: ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ನಾಲೆಗೆ ಆಯ ತಪ್ಪಿ ಬಿದ್ದು ಬೈಕ್ ಸವಾರನೋರ್ವ ಕೊಚ್ಚಿ ಹೋಗಿರುವ ಘಟನೆ ಗದಗ ತಾಲೂಕಿನ ಕುರ್ತಕೋಟಿ ಬಳಿ ನಡೆದಿದೆ.

ಹುಲಕೋಟಿ ಹಾಗೂ ಕುರ್ತಕೋಟಿ ಮಧ್ಯೆ ಇರುವ ಎರಡು ನಾಲೆ(ಹಳ್ಳ)ಗಳು ತುಂಬಿ ಹರಿಯುತ್ತಿವೆ. ಅಂತೂರ-ಬೆಂತೂರ ನಿಂದ ಕುರ್ತಕೋಟಿ ಮಾರ್ಗವಾಗಿ ಗದಗ ಕಡೆಗೆ ಇಬ್ಬರು ಬೈಕ್‍ನಲ್ಲಿ ಬರುತ್ತಿದ್ದ ವೇಳೆ ಇಬ್ಬರು ನಾಲೆಗೆ ಬಿದ್ದು ನೀರು ಪಾಲಾಗಿದ್ದಾರೆ. ಅದರಲ್ಲಿ ಹಿಂಬದಿ ಸವಾರ ಹುಚ್ಚಪ್ಪ ಗುಡಿಮನಿ ಈಜಿ ಪಾರಾಗಿದ್ದಾರೆ. ಆದ್ರೆ ನೀರಿನ ರಭಸಕ್ಕೆ ವಾಹನದೊಂದಿಗೆ ಮತ್ತೋರ್ವ ಸವಾರ ಕೊಚ್ಚಿಹೊಗಿದ್ದಾರೆ.

ನೀರು ಪಾಲಾದ ಸವಾರನ ಹೆಸರು, ಸ್ಥಳ ತಿಳಿದುಬಂದಿಲ್ಲ. ಬೈಕ್‍ನ ಹಿಂದೆ ಕುಳಿತು ಬಂದ ವ್ಯಕ್ತಿ ಹುಚ್ಚಪ್ಪನಿಗೂ ನೀರು ಪಾಲಾದ ವ್ಯಕ್ತಿಗೂ ಯಾವುದೇ ಪರಿಚಯವಿಲ್ಲ. ಚಿಕ್ಕ ಗುಂಜಳ ನಿವಾಸಿ ಹುಚ್ಚಪ್ಪ ಅಪರಿಚಿತ ಬೈಕ್ ಸವಾರನಿಗೆ ಡ್ರಾಪ್ ಕೇಳಿದ್ದಾರೆ. ಆಗ ಇಬ್ಬರೂ ಒಂದೇ ಬೈಕ್‍ನಲ್ಲಿ ಬರುವಾಗ ಮಾರ್ಗಮಧ್ಯ ಇಂತಹೊದೊಂದು ಘಟನೆ ಸಂಭವಿಸಿದೆ.

ಈಜಿ ದಡ ಸೇರಿದ ಹುಚ್ಚಪ್ಪನಿಗೆ ಗಾಯಗಳಾಗಿದ್ದು, ಕುರ್ತಕೋಟಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೀರಿನಲ್ಲಿ ಕೊಚ್ಚಿಹೋದ ಬೈಕ್ ಸವಾರನಿಗಾಗಿ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿಗಳಿಂದ ಶೋಧ ಕಾರ್ಯಾಚರಣೆ ನಡೆದಿದೆ.

ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *