19 ಏಜ್ ಈಸ್ ನಾನ್ಸೆನ್ಸ್ ಅಂದವರ ಗಂಭೀರ ಸಂದೇಶ!

ತ್ತೀಚೆಗೆ ಬಿಡುಗಡೆಯಾಗಿದ್ದ 19 ಏಜ್ ಈಸ್ ನಾನ್ಸೆನ್ಸ್ ಟ್ರೇಲರ್‍ನೊಂದಿಗೆ ಬಹು ನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ. ಟೀಸರ್ ಅಥವಾ ಟ್ರೇಲರ್‍ಗಳನ್ನು ಪರಿಣಾಮಕಾರಿಯಾಗಿ ಇಡೀ ಪ್ರೇಕ್ಷಕ ವರ್ಗವೇ ತಿರುಗಿ ನೋಡುವಂತೆ ಕಟ್ಟಿ ಕೊಡುವುದು ಸಿನಿಮಾ ರೂಪಿಸುವಷ್ಟೇ ಕಷ್ಟದ ಕೆಲಸ. ಅದು ಸಾಧ್ಯವಾದರೆ ಅಂತಹ ಚಿತ್ರಗಳ ಗೆಲುವು ಖಂಡಿತಾ ಸಲೀಸಾಗುತ್ತದೆ. ಈ ಸೂತ್ರದ ಆಧಾರದಲ್ಲಿ ನೋಡ ಹೋದರೆ 19 ಏಜ್ ಈಸ್ ನಾನ್ಸೆನ್ಸ್ ಗೆಲುವು ಸರಾಗವಾಗಿ ಬಿಟ್ಟಿದೆ. ಯಾಕೆಂದರೆ, ಟ್ರೇಲರ್‍ನಲ್ಲಿಯೇ ಚಿತ್ರ ತಂಡ ಮೋಡಿ ಮಾಡುವಂತಹ ಕಂಟೆಂಟನ್ನು ಕಟ್ಟಿ ಕೊಟ್ಟಿದೆ.

ಇದು ಅದೆಷ್ಟೋ ವರ್ಷಗಳ ಕನಸು ಮತ್ತು ಅಗಾಧವಾದ ಸಿನಿಮಾ ವ್ಯಾಮೋಹದಿಂದ ಲೋಕೇಶ್ ನಿರ್ಮಾಣ ಮಾಡಿರುವ ಚಿತ್ರ. ಸುರೇಶ್ ಎಂ ಗಿಣಿ ಇದನ್ನು ನಿರ್ದೇಶನ ಮಾಡಿದ್ದಾರೆ. ಇದರ ಮೂಲಕವೇ ಈಗಿನ್ನೂ ಹತ್ತೊಂಬತ್ತರ ಹರೆಯದ ಹುಡುಗ ಮನುಷ್ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಪರಭಾಷಾ ಸುಂದರಿ ಮಧುಮಿತಾ ಮತ್ತು ಲಕ್ಷ್ಮಿ ಮಂಡ್ಯ ನಾಯಕಿಯರಾಗಿ ಮನುಷ್‍ಗೆ ಜೊತೆಯಾಗಿದ್ದಾರೆ. ಇದು ಯುವ ಸಮೂಹದ ಕಥೆ ಹೊಂದಿರೋ ಚಿತ್ರ. ಆದರೆ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ, ಕುಟುಂಬ ಸಮೇತರಾಗಿ ಕೂತು ನೋಡುವಂತೆ ಈ ಸಿನಿಮಾವನ್ನು ರೂಪಿಸಲಾಗಿದೆಯಂತೆ.

ಹತ್ತೊಂಬತ್ತೆಂಬುದು ಇಡೀ ಜಗತ್ತನ್ನೇ ತುದಿ ಬೆರಳಲ್ಲಿ ಆಡಿಸಿ ಗೆದ್ದು ಬಿಡುವ ಹುಮ್ಮಸ್ಸಿನ ವಯಸ್ಸು. ಅದರ ಉನ್ಮಾದಗಳಿಗೆ ವಾಸ್ತವದ ಪರಿಚಯವಿರುವುದಿಲ್ಲ. ತಾವು ತೆಗೆದುಕೊಳ್ಳೋ ನಿರ್ಧಾರ ತಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬಂತಹ ನಿಕಷಕ್ಕೆ ಒಡ್ಡಿಕೊಳ್ಳುವ ವ್ಯವಧಾನವೂ ಅಲ್ಲಿರುವುದಿಲ್ಲ. ಪ್ರೀತಿ, ದ್ವೇಷ, ಆದರ್ಶಗಳೆಲ್ಲವೂ ಆ ಕಾಲದಲ್ಲಿ ನಿಗಿ ನಿಗಿಸುತ್ತಿರುತ್ತವೆ. ಈ ಕಾರಣದಿಂದಲೇ ಹತ್ತೊಂಬತ್ತರ ವಯಸ್ಸಿಗೆ ಬಂದು ನಿಂತ ಮಕ್ಕಳನ್ನು ಸಂಭಾಳಿಸಲು ಪೋಷಕರು ಹೆಣಗಾಡುತ್ತಾರೆ. ಅಂಥವರಿಗೆಲ್ಲ ಇಲ್ಲಿ ಸಂದೇಶಗಳಿವೆ. ಹತ್ತೊಂಬತ್ತರ ವಯಸ್ಸಿನ ಹುಡುಗರನ್ನು ಹೇಗೆ ಸಂಭಾಳಿಸಬೇಕೆಂಬ ಪ್ರಾಕ್ಟಿಕಲ್ ಅಂಶಗಳೂ ಇದರಲ್ಲಿವೆ. ಅದೆಲ್ಲವೂ ಡಿಸೆಂಬರ್ 6ರಂದು ನಿಮ್ಮೆದುರು ಗರಿಗೆದರಿಕೊಳ್ಳಲಿವೆ.

Leave a Reply

Your email address will not be published. Required fields are marked *