Monday, 19th March 2018

ಸ್ವಂತ ಸೂರಿಲ್ಲ, ನಾಲ್ವರಲ್ಲಿ ಮೂರು ವಿಕಲಾಂಗ ಮಕ್ಕಳು- ಕುಟುಂಬಕ್ಕೆ ಬೇಕಿದೆ ಸಹಾಯ

ಯಾದಗಿರಿ: ಈ ಮಕ್ಕಳು ನೋಡಲು ಎಷ್ಟು ಮುದ್ದಾಗಿ ಕಾಣುತ್ತವೆ. ಆದ್ರೆ ಇವರಿಗೆ ದೇವರು ಸೌಂದರ್ಯವನ್ನು ಮಾತ್ರ ಕೊಟ್ಟಿದ್ದಾನೆ. ಹುಟ್ಟಿನಿಂದ ವಿಕಲಾಂಗತೆ ಹೊಂದಿರುವ ಈ ಮಕ್ಕಳಿಗೆ ಬಡತನ ಎನ್ನುವುದು ಕಾಡುತ್ತಿದೆ. ಚಿಕಿತ್ಸೆ ಹಾಗೂ ಶಿಕ್ಷಣವನ್ನು ಕೊಡಿಸಲು ಪೋಷಕರಿಗೆ ಸಾಧ್ಯವಾಗದೆ ಕುಟುಂಬದ ಸಮೇತ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ರು. ಆದ್ರೆ ನೊಂದ ಕುಟುಂಬ ಇದೀಗ ಪಬ್ಲಿಕ್ ಟಿವಿ ಮೊರೆ ಬಂದಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ ಕವಾಸಪೂರಾದ ನಿವಾಸಿ ಮಹ್ಮದ ಯೂಸುಫ್ ಕುಟುಬಂದ 4 ಮಕ್ಕಳಲ್ಲಿ ಮೂರು ಮಕ್ಕಳು ವಿಕಲಾಂಗತೆಯಿಂದ ಬಳಲುತ್ತಿದ್ದಾರೆ. ಮಹ್ಮದ ಯೂಸುಫ್ ಅವರ ಎರಡನೇ ಮಗ ಮಹ್ಮದ ರಜಾ (11), ಮಹ್ಮದ ಉಬೇದ್ (6) ಹಾಗೂ ನಾಲ್ಕನೆಯ ಮಗಳಾದ ಸಬಾ ಅಂಜುಮ್ (5) ಸೊಂಟದ ಭಾಗದಿಂದ ಸ್ವಾಧೀನ ಕಳೆದುಕೊಂಡಿರುವ ಕಾರಣ ಆ ಮಕ್ಕಳು ನೆಲದಲ್ಲಿ ಜೀವನ ಕಳೆಯುವಂತಾಗಿದೆ. ಇನ್ನು ಎರಡನೇ ಮಗ ಮಹ್ಮದ ರಜಾ ನಡೆಯಲು ಬರುತ್ತೆ ಅನ್ನುವುದರಲ್ಲಿ ನೆಲಕ್ಕೆ ಬೀಳುತ್ತಾನೆ. ಒಂದು ಕಡೆ ತಂದೆ ಆಟೋ ರಿಕ್ಷಾ ಚಾಲನೆಗೆ ಹೊದ್ರೆ, ತಾಯಿ ಶಾಹಿನಾ ಬೇಗಂ ಮಕ್ಕಳ ಪೋಷಣೆಯಲ್ಲಿ ಕಾಲ ಕಳೆಯುವಂತಾಗಿದೆ.

ಈ ಕುಟುಂಬಕ್ಕೆ ಬಡತನ ಎನ್ನುವುದು ಶಾಪವಾಗಿ ಕಾಡುತ್ತಿದೆ. ಮಹ್ಮದ ಯೂಸುಫ್ ತಿಂಗಳ 20 ದಿವಸ ಗುಜರಾತ್‍ಗೆ ತೆರಳಿ ಅಲ್ಲಿ ಅಟೋ ಓಡಿಸಿ 3.4 ಸಾವಿರ ರೂಪಾಯಿ ಸಂಪಾದಿಸಿ ಶಹಾಪೂರಕ್ಕೆ ಆಗಮಿಸಿ ಕುಟುಂಬ ನಡೆಸುತ್ತಿದ್ದಾರೆ. ಇನ್ನು ಸ್ವಂತ ಸೂರು ಇಲ್ಲದ ಕಾರಣ ಶಹಾಪೂರ ಪಟ್ಟಣದಲ್ಲಿ ಕವಾಸಪೂರಾದ ಮಹ್ಮದ ಯೂಸುಫ್ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದಾರೆ. ಸದ್ಯ ಚಿಕ್ಕಪ್ಪ ಗುಜಾರತ್ ನಲ್ಲಿ ದುಡಿಯಲು ಹೋಗಿರುವುದರಿಂದ ಈ ಮನೆಯು ಮಹ್ಮದ ಯೂಸುಫ್ ಗೆ ಬಿಟ್ಟುಕೊಟ್ಟಿದ್ದಾರೆ. ಒಂದು ವೇಳೆ ಚಿಕ್ಕಪ್ಪ ವಾಪಾಸ್ ಶಹಾಪೂರಕ್ಕೆ ಆಗಮಿಸಿದರೆ ಈ ಮನೆ ಬಿಡಬೇಕು. ಇನ್ನೊಂದೆಡೆ ಸರ್ಕಾರಿ ಶಾಲೆ ದೂರವಿದ್ದು, ಮನೆ ಹತ್ತಿರವಿರುವ ಶಾಲೆಗೆ ಮಕ್ಕಳನ್ನು ದಾಖಲಿಸಲು ಡೂನೇಶನ್ ಹಾವಳಿಯಿಂದ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡಿಸಲು ಮಹ್ಮದ ಯೂಸುಫ್ ಗೆ ಸಾಧ್ಯವಾಗುತ್ತಿಲ್ಲ.

ಒಟ್ಟಾರೆ ಈ ಕುಟುಂಬದಲ್ಲಿರುವ ಎರಡು ಮಕ್ಕಳಿಗೆ ಅಂಗವಿಕಲ ಸರ್ಟಿಫಿಕೆಟ್ ಇದ್ದು ಅಂಗವಿಕಲರ ಮಾಸಾಶನಕ್ಕಾಗಿ ತಹಶೀಲ್ದಾರ್ ಕಚೇರಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ. ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹಾಕುತ್ತಿದ್ದಾರೆ. ಹೀಗಾಗಿ ಬೇಸರಗೊಂಡ ಯೂಸುಫ್ ಆ ವಿಚಾರವನ್ನು ಕೈ ಬಿಟ್ಟಿದ್ದಾರೆ. ಸ್ವಂತ ಮನೆಯಿಲ್ಲ, ಇತ್ತ ದುಡಿಯಲು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.

Leave a Reply

Your email address will not be published. Required fields are marked *