Monday, 18th June 2018

Recent News

ನಸುಕಿನ ಜಾವ ಎದ್ದು ಪೇಪರ್ ಹಾಕೋ ಅಕ್ಕ-ತಮ್ಮನಿಗೆ ಬೇಕಿದೆ ಸಹಾಯ

ತುಮಕೂರು: ನಸುಕಿನ ಜಾವ ಕಣ್ಣು ಉಜ್ಜಿಕೊಳ್ಳುತ್ತಾ ಪೇಪರ್ ಹಾಕೋ ಅಕ್ಕ ಮತ್ತು ತಮ್ಮನನ್ನು ನೋಡಿದ್ರೆ ಎಂಥವರ ಕರುಳು ಕೂಡಾ ಚುರ್ರ್ ಅನ್ನಿಸದೆ ಇರದು. ಇವರ ವಯಸ್ಸಿನ ಮಕ್ಕಳು ಇನ್ನೂ ಹಾಸಿಗೆಯಲ್ಲಿ ಮಲಗಿರಬೇಕಾದ್ರೆ ಈ ಮಕ್ಕಳು ಮಾತ್ರ ಕೋಳಿ ಕೂಗುವ ಮುಂಚೆಯೆ ಎದ್ದು ಮನೆ-ಮನೆಗೆ ದಿನಪತ್ರಿಕೆ ಹಂಚುವ ಕಾಯಕ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಚಿಕ್ಕವಯಸ್ಸಿನ ಗಂಡು ಮಕ್ಕಳು ಪೇಪರ್ ಹಂಚೋದು ನೋಡ್ತಿರಾ. ಆದ್ರೆ ಈ ಬಾಲಕಿ ಕೂಡಾ ನಸುಕಿನ ಜಾವವೇ ಎದ್ದು ಪೇಪರ್ ಹಾಕುತ್ತಾಳೆ. ತಮ್ಮ ವಿದ್ಯಾಭ್ಯಾಸದ ಖರ್ಚಿಗಾಗಿ ಹಾಗೂ ಜೀವನ ನಿರ್ವಹಣೆಗಾಗಿ ಪತ್ರಿಕೆ ಹಂಚುವ ಕೆಲಸ ಮಾಡ್ತಾರೆ. ಈ ಮಕ್ಕಳಿಗೆ ಇಷ್ಟೊಂದು ಕಷ್ಟ ಬರಲು ಕಾರಣ ತಂದೆಯ ಅಕಾಲಿಕ ಮರಣ. ಹಾಗಾಗಿ ಈ ಕುಟುಂಬ ಅಕ್ಷರಶಃ ಅನಾಥವಾಗಿದೆ.

ಪತಿ ಚಂದ್ರಶೇಖರ್ ಸಾವನ್ನಪ್ಪಿದ್ದಾಗಿನಿಂದ ಕುಟುಂಬ ನಿರ್ವಹಣೆಯ ಜವಾಬ್ದಾರಿ ಪತ್ನಿ ವಸಂತಿ ಮೇಲೆ ಬಂದಿದೆ. ಅವರಿವರ ಮನೆಯಲ್ಲಿ ಮನೆಕೆಲಸ ಮಾಡಿ ಅಷ್ಟೊ ಇಷ್ಟೊ ಸಂಪಾದಿಸಿದ ಹಣ ಮನೆ ಬಾಡಿಗೆಗೆ ಖರ್ಚಾಗುತ್ತಿದೆ. ಉಳಿದಂತೆ ಅನ್ನಭಾಗ್ಯದಿಂದ ಹೊಟ್ಟೆಪಾಡು ನಡೆಯುತ್ತಿದೆ. ಇಬ್ಬರು ಮಕ್ಕಳು, ವೃದ್ಧ ಅತ್ತೆಯ ಪಾಲನೆ ಕೂಡಾ ವಸಂತಿ ಮೇಲಿದೆ. ಮಕ್ಕಳ ವಿದ್ಯಾಭ್ಯಾಸದ ಖರ್ಚು ಹೊಂದಿಸೋದು ಸಾಹಸವಾಗಿದೆ. ಹಾಗಾಗಿ ತಾಯಿಯ ಕಷ್ಟ ನೋಡಲು ಆಗದ ಮಗಳು ಅಶ್ವಿನಿ ಹಾಗೂ ಮಗ ದರ್ಶನ್ ಬೆಳಗಿನ ಜಾವ ಎದ್ದು ಪೇಪರ್ ಹಾಕಿ ಬಂದ ಹಣದಿಂದ ತಮ್ಮ ವಿದ್ಯಾಭ್ಯಾಸದ ಖರ್ಚು ಭರಿಸೋ ಪ್ರಯತ್ನ ಮಾಡುತ್ತಿದ್ದಾರೆ.

ಕಷ್ಟಪಟ್ಟು ಛಲದಿಂದ ಓದುತ್ತಿರೋ ಈ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಬೇಕಿದೆ. ಇವರ ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಳ್ಳಲು ಹೃದಯವಂತರು ಮುಂದೆ ಬರಬೇಕಾಗಿದೆ.

 

Leave a Reply

Your email address will not be published. Required fields are marked *