ಪರಪುರುಷರು ನೋಡದೇ ಇರಲು ಸುಂದರಿ ಪತ್ನಿಯ ತಲೆಯನ್ನೇ ಬೋಳಿಸಿದ ಪತಿರಾಯ!

ಬೆಂಗಳೂರು: ಪರಪುರುಷರು ಪತ್ನಿಯನ್ನು ನೋಡಬಾರದು ಎನ್ನುವ ಕಾರಣಕ್ಕೆ ಪತ್ನಿಯ ಕೇಶಮುಂಡನ ಮಾಡಿ ಮುಖಕ್ಕೆ ಗುದ್ದಿರುವ ಘಟನೆ ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆಗೆ ನಾಲ್ಕು ವರ್ಷದ ಮಗನಿದ್ದಾನೆ. ಆದ್ರೆ ಪತಿರಾಯನಿಗೆ ಹೆಂಡತಿ ಸೌಂದರ್ಯದ ಚಿಂತೆ. ಸೌಂದರ್ಯವತಿಯಾದ ನನ್ನ ಹೆಂಡತಿಯನ್ನು ಬೇರೆಯವರು ನೋಡ್ತಾರೆ ಎನ್ನುವ ಕೊರಗು ಕಾಡುತಿತ್ತು. ಹೀಗಾಗಿ ಪತ್ನಿಯೊಂದಿಗೆ ಪತಿರಾಯ ಈ ವಿಚಾರದ ಬಗ್ಗೆ ಆಗಾಗ ಜಗಳ ಮಾಡುತ್ತಿದ್ದ.

ಮದುವೆಗೂ ಮುಂಚಿನಿಂದ ಮಹಿಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಬಿಡು ನಿನ್ನನ್ನ ಎಲ್ಲರೂ ನೋಡ್ತಾರೆ ಅಂತಾ ಪತ್ನಿಗೆ ಹಿಂಸೆ ಕೊಡುತ್ತಿದ್ದ. ಜಗಳ ಜಾಸ್ತಿಯಾಗಿ ಏಪ್ರಿಲ್ 17 ರಂದು ಹೆಂಡತಿಯ ಮುಖ ವಿರೂಪಗೊಳಿಸಿ ತಲೆ ಬೋಳಿಸಿದ್ದಾನೆ. ನೊಂದ ಮಹಿಳೆ ಈ ಬಗ್ಗೆ ವನಿತಾ ಸಹಾಯವಾಣಿ ಮೊರೆ ಹೋಗಿದ್ದಾರೆ.

ನನಗೆ ಯಾವುದೇ ಕೌನ್ಸಿಲಿಂಗ್ ಬೇಡ. ನನ್ನ ಗಂಡನಿಂದ ಮುಕ್ತಿ ಕೊಡಿ ಅಂತಾ ನೊಂದ ಮಹಿಳೆ ಕೇಳಿದ್ದಾರೆ. ಮಹಿಳೆಯ ಸ್ಥಿತಿಯನ್ನು ನೋಡಿದ ಮಹಿಳಾ ಸಹಾಯವಾಣಿ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಈ ಬಗ್ಗೆ ಮಹಿಳೆ ಕಡೆಯಿಂದ ದೂರು ದಾಖಲಾಗಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಜಿ ಹಳ್ಳಿ ಪೊಲೀಸರು ಹೇಳಿದ್ದಾರೆ.

ವನಿತಾ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿ ಪ್ರತಿಕ್ರಿಯಿಸಿ, ಕೆಲ ದಿನಗಳ ಹಿಂದೆ ನೊಂದ ಮಹಿಳೆ ನಮ್ಮ ಬಳಿ ಬಂದಿದ್ದಳು. ವಾರಗಳ ಕಾಲ ಮನೆಯಲ್ಲಿ ಕೂಡಿ ಹಾಕಿ ಪತಿ ಹಿಂಸೆ ನೀಡಿದ್ದಾನೆ ಎಂದು ಹೇಳಿಕೆ ನೀಡಿದ್ದಳು. ಈ ವೇಳೆ ನನಗೆ ವಿಚ್ಚೇದನ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಳು. ನಾವು ಕೌನ್ಸಿಲಿಂಗ್ ಮಾಡುತ್ತೇವೆ ಎಂದು ಹೇಳಿದ್ದಕ್ಕೆ, ಆಕೆ, ನನಗೆ ಆತನ ಜೊತೆ ಬದುಕಲು ಇಷ್ಟವಿಲ್ಲ. ನೀವು ಆತನಿಗೆ ಕೌನ್ಸಿಲಿಂಗ್ ಮಾಡಿದ್ರೆ ಅವನು ನನ್ನ ಹೊಡೆಯುತ್ತಾನೆ, ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ ಅವರು ತಿಳಿಸಿದ್ದಾರೆ.

You might also like More from author

Leave A Reply

Your email address will not be published.

badge