Saturday, 23rd June 2018

Recent News

ಬಂಟ್ವಾಳದಲ್ಲಿ ರಮಾನಾಥ ರೈ ಬೆಂಬಲಿಗನ ಗೂಂಡಾಗಿರಿ – ನಡು ರಸ್ತೆಯಲ್ಲಿ ತಲ್ವಾರ್ ನಿಂದ ಹಲ್ಲೆ

ಮಂಗಳೂರು: ಮಾಜಿ ಸಚಿವ ರಮಾನಾಥ ರೈ ಆಪ್ತ, ತುಳು ನಟ ಸುರೇಂದ್ರ ತಮ್ಮ ಬೆಂಬಲಿಗರೊಂದಿಗೆ ಗೂಂಡಾಗಿರಿ ನಡೆಸಿದ್ದು, ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದಿರುವ ಬೀದಿ ಕಾಳಗದಲ್ಲಿ ರಮಾನಾಥ ರೈ ಆಪ್ತ ಸುರೇಂದ್ರ ತಲ್ವಾರ್ ಹಿಡಿದಿದ್ದಾನೆ. ಬಂಟ್ವಾಳ ಪೇಟೆ ಬಳಿಯ ಬಡ್ಡಕಟ್ಟೆ ಎಂಬಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಸುರೇಂದ್ರ ತಲ್ವಾರ್ ಹಿಡಿದು ಬಿಜೆಪಿ ಕಾರ್ಯಕರ್ತರನ್ನು ಅಟ್ಟಿಸಿಕೊಂಡು ಬರುತ್ತಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಂಟ್ವಾಳದ ಹೊಟೇಲ್ ಒಂದರಲ್ಲಿ ಬಿಜೆಪಿ ಕಾರ್ಯಕರ್ತರು ಊಟಕ್ಕೆ ಕುಳಿತಿದ್ದಾಗ, ಸುರೇಂದ್ರ ತನ್ನ ಬೆಂಬಲಿಗರ ಜೊತೆ ಹೊಟೇಲಿಗೆ ನುಗ್ಗಿದ್ದು, ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ, ಎರಡೂ ತಂಡಗಳ ಮಧ್ಯೆ ಜಟಾಪಟಿ ನಡೆದಿದ್ದು, ಕೂಡಲೇ ಅಲ್ಲಿಂದ ತೆರಳಿದ ಸುರೇಂದ್ರ ತನ್ನ ಕಾರಿನಲ್ಲಿದ್ದ ತಲ್ವಾರ್ ಎತ್ತಿಕೊಂಡು ಬಂದು ಬಿಜೆಪಿ ಕಾರ್ಯಕರ್ತರನ್ನು ಅಟ್ಟಿಸಿಕೊಂಡು ಹೋಗಿದ್ದಾನೆ.

ಘಟನೆಯಲ್ಲಿ ಗಣೇಶ್ ಮತ್ತು ಪುಷ್ಪರಾಜ್ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ. ಇಷ್ಟಕ್ಕೂ ಈ ಸುರೇಂದ್ರ ಈ ಹಿಂದೆ ಎರಡು ತುಳು ಸಿನಿಮಾಗಳಲ್ಲಿ ನಟಿಸಿದ್ದು, ತುಳು ಸಿನಿಮಾ ರಂಗದ ಕಲಾವಿದರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ. ಅಲ್ಲದೆ, ಮಂಗಳೂರು ಮತ್ತು ಬಂಟ್ವಾಳದಲ್ಲಿ ಹಣದ ವ್ಯವಹಾರ ನಡೆಸುತ್ತಾ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ.

ಬಂಟ್ವಾಳದ ಬೀದಿ ಕಾಳಗ ಮೊಬೈಲಿನಲ್ಲಿ ಸೆರೆಯಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರೂ ಆರೋಪಿ ಸುರೇಂದ್ರನನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ವಿಡಿಯೋವನ್ನು ಆಧರಿಸಿ ಬಂಟ್ವಾಳ ಪೊಲೀಸರು ಆರೋಪಿಯನ್ನು ಬಂಧಿಸುವ ಸಾಧ್ಯತೆಯಿದೆ.

ಆರೋಪಿ ಸುರೇಂದ್ರ ಈ ಹಿಂದೆಯೂ ಇಂತಹ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಮೂರು ವರ್ಷಗಳ ಹಿಂದೆ ರಮಾನಾಥ ಎಂಬ ಬಿಜೆಪಿ ಕಾರ್ಯಕರ್ತನ ಕೊಲೆಗೆ ಯತ್ನಿಸಿ, ಪ್ರಕರಣ ಎದುರಿಸುತ್ತಿದ್ದ. ಬಳಿಕ ಕಾಂಗ್ರೆಸ್ ಪ್ರಮುಖರ ಜೊತೆ ಸೇರಿ ಮೂಲಕ ಹೈಕೋರ್ಟ್‍ಗೆ ಹೋಗಿ ಪ್ರಕರಣದಿಂದ ಮುಕ್ತನಾಗಿದ್ದ ಎನ್ನುವ ವಿಚಾರ ಸಿಕ್ಕಿದೆ.

Leave a Reply

Your email address will not be published. Required fields are marked *