Tuesday, 22nd May 2018

Recent News

ಬಿಎಸ್‍ವೈ ನಮ್ಮ ಮುಂದಿನ ಸಿಎಂ-ಬೆಂಗಳೂರಲ್ಲಿ ಯಡಿಯೂರಪ್ಪ ಬೆನ್ನು ತಟ್ಟಿದ ಅಮಿತ್ ಶಾ

ಬೆಂಗಳೂರು: ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ ಅಂತಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಸರಿಸಿದ್ದಾರೆ.

ಇಂದು ಬೆಂಗಳೂರಿಗೆ ಆಗಮಿಸಿದ ನಂತರ ಮಾತನಾಡಿದ ಅಮಿತ್ ಶಾ, ಮೂರು ದಿನ ಬೆಂಗಳೂರನಲ್ಲಿ ಇರ್ತೇನೆ. ಕರ್ನಾಟಕದ ಬಹುತೇಕ ಕಾರ್ಯಕರ್ತರೊಂದಿಗೆ ಚರ್ಚಿಸ್ತೇನೆ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ದಕ್ಷಿಣ ಭಾರತದಲ್ಲಿ ಮತ್ತೆ ಬಿಜೆಪಿ ಗೆಲುವನ್ನ ಆರಂಭಿಸಲಿದೆ. ಬಿಜೆಪಿ ಗೆಲುವಿಗೆ ಕರ್ನಾಟಕ ಮುನ್ನುಡಿ ಬರೆಯಲಿದೆ ಅಂದ್ರು.

ಕರ್ನಾಟಕದ ಜನ ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮೋದಿ ಗೆಲುವಿನ ರಥವನ್ನು ಕರ್ನಾಟಕದಲ್ಲೂ ಯಶಸ್ವಿಗೊಳಿಸಿ ಅಂತ ಅಮಿತ್ ಶಾ ಹೇಳಿದ್ರು.

ಇದನ್ನೂ ಓದಿ: ಏರ್‍ಪೋರ್ಟ್ ನಿಂದ ರಸ್ತೆಯಲ್ಲಿ ಬರುವಾಗಲೇ ರಾಜ್ಯ ಬಿಜೆಪಿ ನಾಯಕರಿಗೆ ಷಾ ತರಾಟೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 3 ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ವಿಧಾನಸಭಾ ಚುನಾವಣೆಗೆ ಉಳಿದಿರುವುದು 10 ತಿಂಗಳಷ್ಟೇ. ಈ ಹಿನ್ನೆಲೆಯಲ್ಲಿ ಮಿಷನ್-150 ಸಾಕಾರಗೊಳಿಸಲು ಅಗತ್ಯ ರಣತಂತ್ರ ರೂಪಿಸಿ ರಾಜ್ಯ ಬಿಜೆಪಿಗೆ ಹೊಸ ಶಕ್ತಿ ತುಂಬುವುದು ಬಿಜೆಪಿ ಚಾಣಾಕ್ಷನ ಭೇಟಿಯ ಪ್ರಮುಖ ಉದ್ದೇಶವಾಗಿದೆ.

ಒಕ್ಕಲಿಗ ಮುಖಂಡ ಇಂಧನ ಸಚಿವ ಡಿಕೆ ಶಿವಕುಮಾರ್ ಮೇಲಿನ ಐಟಿ ದಾಳಿ, ಪ್ರತ್ಯೇಕ ಲಿಂಗಾಯತ ಧರ್ಮ, ಕನ್ನಡ ಧ್ವಜ ವಿವಾದದ ಹೊತ್ತಲ್ಲೇ ಶಾ ಪ್ರವಾಸ ಸಾಕಷ್ಟು ಮಹತ್ವ ಪಡೆದಿದೆ. ಇನ್ನು ಭಾನುವಾರದಂದು ಅಮಿತ್ ಶಾ ಆದಿಚುಂಚನಗಿರಿ ಮಠಕ್ಕೆ ತೆರಳಿ ನಿರ್ಮಲಾನಂದ ಸ್ವಾಮೀಜಿಯನ್ನು ಭೇಟಿಯಾಗಲಿದ್ದಾರೆ. ಡಿಕೆಶಿ ಮೇಲಿನ ಐಟಿ ದಾಳಿ ಬಳಿಕ ಒಕ್ಕಲಿಗ ಸಮುದಾಯದಲ್ಲಿ ಪಕ್ಷದ ವಿರುದ್ಧ ಎದ್ದಿರುವ ಅಸಮಾಧಾನ ಶಮನಕ್ಕಾಗಿ ಈ ಭೇಟಿ ನಡೆಯುತ್ತಿದೆ ಎನ್ನಲಾಗಿದೆ.

ಇವತ್ತು ಸಂಜೆ ಖಾಸಗಿ ಹೋಟೆಲ್‍ನಲ್ಲಿ 600 ಜನ ಚಿಂತಕರ ಜೊತೆ ಸಂವಾದವನ್ನೂ ನಡೆಸಲಿದ್ದಾರೆ. ಇದಕ್ಕೆ ರಿಯಲ್‍ಸ್ಟಾರ್ ಉಪ್ಪಿಗೂ ಆಹ್ವಾನ ನೀಡಿರುವುದು ವಿಶೇಷ. ಬಿಜೆಪಿ ಮತ್ತು ಆರ್‍ಎಸ್‍ಎಸ್ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುವುದಕ್ಕೂ ಸಭೆ ನಡೆಸಲಿದ್ದಾರೆ ಶಾ. ಮೂಲಗಳ ಪ್ರಕಾರ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡುವಂತೆ ಬಿಜೆಪಿ ನಾಯಕರು ಶಾ ಮುಂದೆ ಬೇಡಿಕೆ ಮಂಡಿಸುವ ಸಾಧ್ಯತೆ ಇದೆ. 5 ಸಾವಿರ ಸಾಮಾಜಿಕ ಜಾಲತಾಣ ಗುಂಪುಗಳ ರಚನೆ ಬಗ್ಗೆ ನಿರ್ಧಾರ ಹೊರಬೀಳಲಿದೆ. ಎಸ್‍ಟಿ/ಎಸ್‍ಟಿ. ಹಿಂದುಳಿದ ವರ್ಗಗಳ ನಾಯಕರ ಜೊತೆಗೂ ಶಾ ಸಮಾಲೋಚನೆ ನಡೆಸಲಿದ್ದಾರೆ.

 

 

 

 

Leave a Reply

Your email address will not be published. Required fields are marked *