Monday, 24th February 2020

Recent News

ಸ್ಟಂಪ್ ಮೈಕ್‍ನಿಂದ ಆಸೀಸ್ ನಾಯಕಿ ಪಾರು- ವಿಡಿಯೋ

ಮೆಲ್ಬರ್ನ್: ಆಸ್ಟ್ರೇಲಿಯಾ ಮತ್ತು ಭಾರತದ ಮಹಿಳೆಯರ ನಡುವೆ ನಡೆದ ಟಿ20 ಟೂರ್ನಿ ಫೈನಲ್ ಪಂದ್ಯದಲ್ಲಿ ಸ್ಟಂಪ್ ಮೈಕಿನಿಂದಾಗಿ ಆಸ್ಟ್ರೇಲಿಯಾದ ನಾಯಕಿ ಲ್ಯಾನಿಂಗ್ ಪಾರಾಗಿದ್ದಾರೆ.

ಬುಧವಾರ ನಡೆದ ತ್ರಿಕೋನ ಸರಣಿಯ ಫೈನಲ್‍ನಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಭಾರತವನ್ನು ಸೋಲಿಸಿತು. ಆಸ್ಟ್ರೇಲಿಯಾ ಇನ್ನಿಂಗ್ಸ್ ವೇಳೆ ಮೆಗ್ ಲ್ಯಾನಿಂಗ್ ಅವರು ಸ್ಟಂಪ್-ಮೈಕ್‍ನಿಂದಾಗಿ ವಿಕೆಟ್ ಉಳಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇನ್ನಿಂಗ್ಸ್ ನ 14ನೇ ಓವರಿನಲ್ಲಿ ಮೆಗ್ ಲ್ಯಾನಿಂಗ್ ವೇಗವಾಗಿ ಒಂಟಿ ರನ್ ಕದಿಯಲು ಮುಂದಾದರು. ತಕ್ಷಣವೇ ಕೈಗೆ ಸಿಕ್ಕಿದ ಬಾಲ್ ಎತ್ತಿಕೊಂಡ ಶಿಖಾ ಪಾಂಡೆ ವಿಕೆಟ್ ಕಡೆಗೆ ಎಸೆದರು. ಆದರೆ ಬಾಲ್ ಸ್ಟಂಪ್ ಹಿಂದಿದ್ದ ಮೈಕ್‍ಗೆ ಬಿದ್ದು ಬೇರೆ ಕಡೆಗೆ ಹೋಯಿತು. ಇದರಿಂದಾಗಿ ಲ್ಯಾನಿಂಗ್ ಅವರಿಗೆ ಜೀವದಾನ ಸಿಕ್ಕಂತಾಯಿತು. ಈ ವಿಡಿಯೋವನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಬೆಥ್ ಮೂನಿ ಅವರ ಅಜೇಯ 71 ರನ್‍ಗಳಿಂದ ಆಸ್ಟ್ರೇಲಿಯಾ ಮಹಿಳಾ ತಂಡ ಆರು ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತ್ತು. ಇದೇ ಸಮಯದಲ್ಲಿ ಭಾರತದ ಬೌಲರ್ ದೀಪ್ತಿ ಶರ್ಮಾ ಅವರು ನಾಲ್ಕು ಓವರ್ ಬೌಲಿಂಗ್ ಮಾಡಿ 30 ರನ್ ನೀಡಿ ಮೂರು ವಿಕೆಟ್ ಕಿತ್ತು ಮಿಂಚಿದರು.

ಆಸ್ಟ್ರೇಲಿಯಾ ನೀಡಿದ್ದ 156 ರನ್‍ಗಳ ಗುರಿ ಬೆನ್ನಟ್ಟಿದ ಭಾರತವು ಕಳಪೆ ಆರಂಭಕ್ಕೆ ತುತ್ತಾಯಿತು. ಇನ್ನಿಂಗ್ಸ್ ಎರಡನೇ ಓವರಿನಲ್ಲಿ ಟೇಲಾ ವ್ಲೇಮಿಂಕ್ ಅವರು ಶಫಾಲಿ ವರ್ಮಾ ವಿಕೆಟ್ ಕಿತ್ತರು. ರಿಚಾ ಘೋಷ್ ಹಾಗೂ ಸ್ಮೃತಿ ಮಂಧನಾ ಎರಡನೇ ವಿಕೆಟ್‍ಗೆ 43 ರನ್ ಗಳಿಸಿದರು. 17 ರನ್ ಗಳಿಸಿದ್ದ ರಿಚಾ ಘೋಷ್ ಅವರನ್ನು ಅನ್ನಾಬೆಲ್ ಸದಲ್ರ್ಯಾಂಡ್ ಔಟ್ ಮಾಡಿದರು. ಆದರೆ ಮಂಧನಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 12ನೇ ಅಂತರರಾಷ್ಟ್ರೀಯ ಟಿ20 ಅರ್ಧಶತಕವನ್ನು ಗಳಿಸಿದರು.

ಭಾರತವು 14 ಓವರ್‌ಗಳ ನಂತರ ನಾಲ್ಕು ವಿಕೆಟ್‍ಗೆ 113 ರನ್ ಗಳಿಸಿತ್ತು. ಕೊನೆಯ ಐದು ಓವರ್‌ಗಳಲ್ಲಿ ನಾಯಕಿ ಹರ್ಮನ್‍ಪ್ರೀತ್ ಕೌರ್ ಮತ್ತು ಮಂಧನಾ 43 ರನ್ ಗಳಿಸಿದರು. ಮಂಧನಾ ವಿಕೆಟ್ ಒಪ್ಪಿಸಿದ ಬಳಿಕ ಭಾರತ ತಂಡವು ಆಘಾತಕ್ಕೆ ಒಳಗಾಯಿತು. ಪರಿಣಾಮ 11 ರನ್‍ಗಳಿಂದ ಸೋಲು ಕಂಡಿತು.

Leave a Reply

Your email address will not be published. Required fields are marked *