Tuesday, 22nd May 2018

Recent News

ಈಗ ರಾಹುಲ್ ರಾಜ್ಯ ನಾಯಕ, ಸಿದ್ದರಾಮಯ್ಯ ರಾಷ್ಟ್ರೀಯ ನಾಯಕ: ಶೋಭಾ ಕರಂದ್ಲಾಜೆ

ಬೆಂಗಳೂರು: ರಾಹುಲ್ ಗಾಂಧಿಯವರು ತಮ್ಮ ರಾಜ್ಯ ಪ್ರವಾಸದಲ್ಲಿ ಬರೀ ಚುನಾವಣೆಗಾಗಿ ಮಾತ್ರ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಸಿದ್ದರಾಮಯ್ಯನವರು 6 ಬಾರಿ ಉಡುಪಿಗೆ ಭೇಟಿ ನೀಡಿದರೂ, ಕೃಷ್ಣ ಮಠಕ್ಕೆ ಭೇಟಿ ನೀಡಿರಲಿಲ್ಲ. ಈಗ ಚುನಾವಣೆ ಸಮಯ ಬಂತೆಂದು ದೇವಾಲಯಗಳಿಗೆ ಭೇಟಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ದೂರಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತೀ ಬಾರಿಯೂ ಸಮಾವೇಶದ ಕೊನೆಯಲ್ಲಿ ರಾಷ್ಟ್ರೀಯ ನಾಯಕರು ಭಾಷಣ ಮಾಡುವುದು ರೂಢಿ. ಆದರೆ ರಾಹುಲ್ ಗಾಂಧಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಕೊನೆಯ ಭಾಷಣ ಮಾಡಿದ್ದಾರೆ. ಪ್ರಥಮ ದಿನದಂದು ಮಾಡಿದ ಭಾಷಣದ ಪ್ರತಿಯನ್ನೇ ಕೊನೆಯವರೆಗೂ ಓದಿ ಹೇಳಿದ್ದಾರೆ. ರಾಹುಲ್ ಗಾಂಧಿಯ ಹೆಸರಿನಲ್ಲಿ ಜನ ಸೇರಿಸಿ ಪ್ರವಾಸದ ಉದ್ದಕ್ಕೂ ಸಿಎಂ ಸಿದ್ದರಾಮಯ್ಯ ಅವರೇ ಭಾಷಣ ಮಾಡಿದ್ದಾರೆ. ರಾಹುಲ್ ಪ್ರವಾಸದಲ್ಲಿ ಸಿಎಂ ಸಿದ್ದರಾಮಯ್ಯ ರಾಷ್ಟ್ರೀಯ ನಾಯಕರಾಗಿ ಬಿಂಬಿತರಾಗಿದ್ದರೆ, ರಾಹುಲ್ ಗಾಂಧಿ ಪ್ರಾದೇಶಿಕ ನಾಯಕರಂತೆ ಕಾಣುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ರಾಹುಲ್ ಗಾಂಧಿಯವರ ಪ್ರವಾಸದಲ್ಲಿ ದೇವಾಲಗಳ ಭೇಟಿ ಮಾಡುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿಯೂ ದೇವಾಲಯಗಳ ಭೇಟಿ ಮುಂದುವರೆಸುತ್ತಿರುವ ರಾಹುಲ್ ಅವರು ಉಡುಪಿ ಮಠವನ್ನು ಭೇಟಿ ಮಾಡುವುದನ್ನು ಎದುರು ನೋಡುತ್ತಿದ್ದೇವೆ. 5 ಬಾರಿ ಉಡುಪಿಗೆ ಸಿದ್ದರಾಮಯ್ಯ ಭೇಟಿ ನೀಡಿದರೂ ಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ. ರಾಹುಲ್ ಉಡುಪಿ ಭೇಟಿ ಮಾಡುವ ವೇಳೆಯಲ್ಲಾದರೂ ಅವರ ಜೊತೆ ಕೃಷ್ಣ ಮಠಕ್ಕೆ ಸಿಎಂ ಹೋಗ್ತಾರಾ ಅನ್ನೋದನ್ನ ಕುತೂಹಲದಿಂದ ಕಾಯುತ್ತಿದ್ದೇವೆ ಎಂದು ಹೇಳಿದರು.

ರಾಷ್ಟ್ರೀಯ ಅಧ್ಯಕ್ಷರಾಗಬೇಕು ಎಂಬುದು ರಾಹುಲ್ ಆಸೆಯಾಗಿತ್ತು. ಆದರೆ ರಾಹುಲ್ ರಾಜ್ಯ ನಾಯಕನಾದರೆ, ಸಿದ್ದರಾಮಯ್ಯ ರಾಷ್ಟ್ರೀಯ ನಾಯಕ ಆಗಿದ್ದಾರೆ. ಇದರಿಂದ ರಾಹುಲ್ ಗಾಂಧಿ ಎಲ್ಲಿದ್ದಾರೆ, ಸಿದ್ದರಾಮಯ್ಯ ಎಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ. ಮಠ ಮಂದಿರಗಳನ್ನು ಸುತ್ತೋದಕ್ಕೆ ಮತ್ತು ಮೋದಿಯವರನ್ನು ತೆಗಳಲು ದೆಹಲಿಯಿಂದ  ರಾಹುಲ್ ರಾಜ್ಯಕ್ಕೆ ಬಂದಿದ್ದಾರೆ ಎಂದು ಹೇಳಿ ಶೋಭಾ ಕರಂದ್ಲಾಜೆ ಟೀಕಿಸಿದರು. ಇದನ್ನೂ ಓದಿ: ರಕ್ತದ ಪರಿಚಯವಿಲ್ಲದವರಿಗೆ ರಕ್ತದ ಪರಿಚಯವಾಗಲು ಶುರುವಾಗಿದೆ: ಅನಂತ್ ಕುಮಾರ್ ಹೆಗ್ಡೆ

ಆಚರಣೆಗೆ ವಿರೋಧ: ರಾಜ್ಯ ಸರ್ಕಾರದಿಂದ ಮಾರ್ಚ್ 6ಕ್ಕೆ ಬಹಮನಿ ಸುಲ್ತಾನರ ಉತ್ಸವ ನಡೆಯುವ ವಿಚಾರವಾಗಿ ಮಾತನಾಡಿದ ಕರಂದ್ಲಾಜೆ, ಉತ್ಸವ ಆಚರಣೆಯನ್ನು ಸರ್ಕಾರ ಇನ್ನೂ ಬಹಿರಂಗಗೊಳಿಸಿಲ್ಲ. ಇದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಿದೆ. ಆದರೆ ಕರ್ನಾಟಕ ನವನಿರ್ಮಾಣಕ್ಕೆ ಸಿದ್ಧ ಎಂದಿರುವ ಸರ್ಕಾರವು, ಟಿಪ್ಪು ಜಯಂತಿ ಮತ್ತು ಬಹಮನಿ ಸುಲ್ತಾನರ ಉತ್ಸವ ಆಚರಿಸುವ ಮೂಲಕ ಕರ್ನಾಟಕವನ್ನು ಅಧೋಗತಿಗೆ ತಗೆದುಕೊಂಡು ಹೋಗುತ್ತಿದೆ. ಇದೊಂದು ಕಾನೂನು ಸುವ್ಯವಸ್ಥೆ ಹದಗೆಡಿಸುವ ಉತ್ಸವ. ಬಹಮನಿ ಸುಲ್ತಾನರ ಉತ್ಸವಕ್ಕೆ ನಮ್ಮ ವಿರೋಧವಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಕುರಿತು ಪ್ರತಿಭಟನೆ ಮಾಡಲಾಗುವುದು ಮತ್ತು ಯಾವುದೇ ಕಾರಣಕ್ಕೂ ಈ ಉತ್ಸವದ ಆಚರಣೆಗೆ ನಾವು ಬಿಡಲ್ಲ ಎಂದು ಎಚ್ಚರಿಸಿದರು.

 

Leave a Reply

Your email address will not be published. Required fields are marked *