Monday, 24th February 2020

Recent News

328 ದಿನ ಬಾಹ್ಯಾಕಾಶದಲ್ಲಿದ್ದ ಗಗನಯಾತ್ರಿಯನ್ನು ಅಪ್ಪಿ ಮುದ್ದಾಡಿದ ಶ್ವಾನ – ವಿಡಿಯೋ

ವಾಷಿಂಗ್ಟನ್: 328 ದಿನ ಬಾಹ್ಯಾಕಾಶದಲ್ಲಿ ಇದ್ದು ಬಂದ ನಾಸಾದ ಮಹಿಳಾ ಗಗನಯಾತ್ರಿಯನ್ನು ಶ್ವಾನ ಅಪ್ಪಿ ಮುದ್ದಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ನಾಸಾದ ಗಗನಯಾತ್ರಿ ಕ್ರಿಸ್ಟನ್ ಕೋಚ್ 328 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇದ್ದು, ಫೆಬ್ರವರಿ 6 ರಂದು ವಾಪಸ್ ಬಂದಿದ್ದು ಮನೆಗೆ ತೆರಳಿದ್ದಾರೆ. ಮನೆಗೆ ಹೋದಾಗ ಆಕೆ ಪ್ರೀತಿಯ ನಾಯಿ ಅವರನ್ನು ಬರಮಾಡಿಕೊಂಡ ರೀತಿಯನ್ನು ವಿಡಿಯೋ ಮಾಡಿ ಕೋಚ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಶ್ವಾನದ ಪ್ರೀತಿಯನ್ನು ನೋಡಿದ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಕೋಚ್ ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ 30 ಸೆಕೆಂಡಿನ ವಿಡಿಯೋದಲ್ಲಿ, ಕೋಚ್ ತನ್ನ ಪತಿಯ ಜೊತೆ ಬರುವುದನ್ನು ಗಮನಿಸಿದ ಶ್ವಾನ ಅವರು ಮನೆಯೊಳಗೆ ಬರುವ ಮುಂಚೆಯೇ ಬಾಗಿಲ ಬಳಿ ಬಹಳ ಉತ್ಸಾಹದಿಂದ ಕಾಯುತ್ತಿರುತ್ತದೆ. ಬಾಗಿಲು ತೆರೆದು ಒಳ ಬಂದ ಕೋಚ್ ಅವರನ್ನು ತುಂಬ ಖುಷಿಯಾಗಿ ಅಪ್ಪಿಕೊಂಡು ಮುದ್ದಾಡುತ್ತದೆ. ವಿಡಿಯೋದಲ್ಲಿ ಬಹಳ ದಿನದ ನಂತರ ಕೋಚ್ ಅವರನ್ನು ಕಂಡ ಶ್ವಾನದ ಸಂತೋಷವನ್ನು ನಾವು ಕಾಣಬಹುದು.

ಕ್ರಿಸ್ಟನ್ ಕೋಚ್ ಅವರು ಈ ಶ್ವಾನವನ್ನು ಮಾನವೀಯ ಸಮಾಜದಿಂದ ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಕೋಚ್ ಅವರು, ಯಾರು ಹೆಚ್ಚು ಉತ್ಸುಕರಾಗಿದ್ದರೋ ಎಂದು ನನಗೆ ಗೊತ್ತಿಲ್ಲ. ಒಂದು ವರ್ಷದ ನಂತರ ಅವಳು ನನ್ನನ್ನು ನೆನಪಿಸಿಕೊಂಡಿದ್ದಕ್ಕೆ ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ನಾಸಾದಲ್ಲಿ 2013 ರಿಂದ ಗಗನಯಾತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕ್ರಿಸ್ಟನ್ ಕೋಚ್, 2019 ಮಾರ್ಚ್ 14 ರಂದು ಬಾಹ್ಯಕಾಶಕ್ಕೆ ಹೋಗಿ ಸತತ 328 ದಿನಗಳ ನಂತರ ಅಂದರೆ ಫೆಬ್ರವರಿ 6 ರಂದು ಭೂಮಿಗೆ ವಾಪಸ್ ಆಗಿದ್ದರು. ಈ ಮೂಲಕ ಅತೀ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಇದ್ದು ಬಂದ ಮಹಿಳೆ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

Leave a Reply

Your email address will not be published. Required fields are marked *