ಇಂದಿನಿಂದ ಎಟಿಎಂಗಳು ಓಪನ್- 50, 100 ರೂ. ನೋಟುಗಳು ಲಭ್ಯ


– 2 ಸಾವಿರ ನೋಟಿನ ಸೋರಿಕೆ ಬಗ್ಗೆ ತನಿಖೆ ಸಾಧ್ಯತೆ

ಬೆಂಗಳೂರು: ಮಂಗಳವಾರ ಮಧ್ಯರಾತ್ರಿ ಜಾರಿಯಾದ ಕರೆನ್ಸಿ ಕಾರ್ಯಾಚರಣೆ ಬೆನ್ನಲ್ಲೇ ಬಾಗಿಲು ಹಾಕಿಕೊಂಡಿದ್ದ ಎಟಿಎಂಗಳು ಇಂದಿನಿಂದ ಮತ್ತೆ ತೆರೆದಿವೆ.

money-exchange

ಗುರುವಾರದಿಂದ ಹಳೆಯ ಐನೂರು ಮತ್ತು ಸಾವಿರ ರೂಪಾಯಿ ನೋಟಿಗಾಗಿ ಬ್ಯಾಂಕ್, ಅಂಚೆ ಕಚೇರಿಗಳ ಮುಂದೆ ಸಾಲುಗಟ್ಟಿ ನಿಂತಿದ್ದ ಗ್ರಾಹಕರು ಇವತ್ತು ಮುಂಜಾನೆಯಿಂದ ಎಟಿಎಂನತ್ತ ಧಾವಿಸುತ್ತಿದ್ದಾರೆ. ದೈನಂದಿನ ಖರ್ಚಿಗೆ ಬೇಕಾದ ದುಡ್ಡನ್ನು ಬ್ಯಾಂಕ್‍ಗೆ ಹೋಗಿ ಡ್ರಾ ಮಾಡಿಕೊಳ್ಳುವುದು ಕಷ್ಟ. ಅದ್ದರಿಂದ ಗ್ರಾಹಕರು ಎಟಿಎಂನತ್ತ ಮುಖ ಮಾಡಿದ್ದಾರೆ. ಆದರೆ ಎಟಿಎಂನಲ್ಲಿ ಹೊಸ ಐನೂರು ಮತ್ತು ಎರಡು ಸಾವಿರ ರೂಪಾಯಿ ನೋಟು ಸಿಗಲ್ಲ. ಬದಲಿಗೆ 50 ರೂಪಾಯಿ ಮತ್ತು 100 ರೂಪಾಯಿ ನೋಟುಗಳು ಲಭ್ಯ.

ದಿನವೊಂದಕ್ಕೆ ಕಾರ್ಡ್‍ವೊಂದರಲ್ಲಿ ಹೆಚ್ಚೆಂದರೆ 2 ಸಾವಿರ ರೂಪಾಯಿ ಡ್ರಾ ಮಾಡಬಹುದು. ನವೆಂಬರ್ 19ರ ಬಳಿಕ ಈ ಮೊತ್ತವನ್ನು 4 ಸಾವಿರ ರೂಪಾಯಿಗೆ ಹೆಚ್ಚಿಸಲಾಗುತ್ತದೆ. ಎಟಿಎಂಗಳಲ್ಲೇ ಇರುವ ಕ್ಯಾಶ್ ಡೆಪಾಸಿಟರ್‍ಗಳಲ್ಲೂ ಹಳೆಯ ಐನೂರು, ಸಾವಿರ ರೂಪಾಯಿ ನೋಟನ್ನ ಜಮೆ ಮಾಡುವುದಕ್ಕೆ ಅವಕಾಶವಿದೆ. ಆದ್ರೆ ಕಾರ್ಡ್ ಆಧರಿತ ಜಮೆಗೆ ಮಾತ್ರ ಅನುಮತಿ ಇದೆ. ಅಂದರೆ ನೀವು ಡೆಬಿಟ್ ಕಾರ್ಡ್‍ನ್ನು ಗೀಚಿ ಮಾತ್ರ ಜಮೆ ಮಾಡಬಹುದು.

money-exchange-1

ಈ ನಡುವೆ ಬೇರೆ ಬ್ಯಾಂಕಿನ ಎಟಿಎಂ ಬಳಕೆಗೆ ಶುಲ್ಕ ವಿಧಿಸುವಂತಿಲ್ಲ ಎಂದು ಆರ್‍ಬಿಐ ಸೂಚನೆ ನೀಡಿದೆ. ಹೀಗಾಗಿ ಯಾವ ಬ್ಯಾಂಕಿನ ಎಟಿಎಂಯಲ್ಲಾದ್ರೂ ಹಣ ಡ್ರಾ ಮಾಡಬಹುದು. ಎಟಿಎಂಗಳಲ್ಲಿ ಹಣದ ವಿತರಣೆ ಸಹಜ ಸ್ಥಿತಿಗೆ ಮರುಳುವುದಕ್ಕೆ ಇನ್ನೂ ಹತ್ತು ದಿನಗಳು ಬೇಕಾಗಲಿದೆ. ಮಧ್ಯರಾತ್ರಿಯಿಂದಲೇ ಹಳೆಯ ನೋಟುಗಳ ಬಳಕೆಗೆ ಆಸ್ಪತ್ರೆ, ಪೆಟ್ರೋಲ್ ಬಂಕ್, ರೈಲ್ವೆ ಟಿಕೆಟ್, ಏರ್‍ಪೋರ್ಟ್, ಬಸ್‍ಸ್ಟ್ಯಾಂಡ್‍ಗಲ್ಲಿ ಟಿಕೆಟ್ ಖರೀದಿಗೆ ನೀಡಲಾಗಿದ್ದ ವಿನಾಯಿತಿ ಕೂಡಾ ಕೊನೆಯಾಗಿದೆ. ಆದರೆ ನಗರಸಭೆ, ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಹಳೆಯ ನೋಟಲ್ಲೇ ತೆರಿಗೆ ಪಾವತಿ ಮಾಡಬಹುದು. ಆದ್ರೆ ತೆರಿಗೆದಾರರ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಸ್ಥಳೀಯ ಸಂಸ್ಥೆಗಳ ಹೊಣೆಗಾರಿಕೆ.

ಇತ್ತ ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಮುಗಿಯೋದಕ್ಕೂ ಮೊದಲು ಅತ್ಯಂತ ಗೌಪ್ಯವಾಗಿದ್ದ 2 ಸಾವಿರ ರೂಪಾಯಿ ನೋಟಿನ ಚಿತ್ರ ಹೇಗೆ ಸೋರಿಕೆ ಆಯಿತು ಅನ್ನೋ ಬಗ್ಗೆ ಕೇಂದ್ರ ಸರ್ಕಾರ ತನಿಖೆಗೆ ನಿರ್ಧರಿಸಿದೆ.

loading...

LEAVE A REPLY