Sunday, 24th June 2018

Recent News

ಟೆಕ್ಕಿ ಆಯ್ತ, ಈಗ ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿ ಹತ್ಯೆ

ವಾಷಿಂಗ್ಟನ್: ಕಾನ್ಸಾಸ್‍ನಲ್ಲಿ ಭಾರತೀಯ ಮೂಲದ ಎಂಜಿನಿಯರ್ ಶ್ರೀನಿವಾಸ್ ಹತ್ಯೆಯ ಬೆನ್ನಲ್ಲೇ ಭಾರತೀಯ ಮೂಲದ ಉದ್ಯಮಿಯೊಬ್ಬರನ್ನು ಅಮೆರಿಕದ ಅವರ ಮನೆಯ ಹೊರಗೆ ಹತ್ಯೆ ಮಾಡಲಾಗಿದೆ.

ಇಲ್ಲಿನ ಸೌತ್ ಕ್ಯಾರೊಲಿನಾದ ಲ್ಯಾಂಕ್ಯಾಸ್ಟರ್ ಕೌಂಟಿಯಲ್ಲಿ ಅಂಗಡಿಯೊಂದರ ಮಾಲೀಕರಾಗಿದ್ದ 43 ವರ್ಷದ ಹರ್ನಿಶ್ ಪಟೇಲ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಗುರುವಾರದಂದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಟೇಲ್ ಅವರು ಗುರುವಾರದಂದು ಸುಮಾರು 11.24ರ ವೇಳೆಯಲ್ಲಿ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಟಿದ್ದು, ಬಳಿಕ ಅವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಅಂಗಡಿಯಿಂದ ಪಟೇಲ್ ಅವರ ಮನೆಗೆ 6 ಕಿ.ಮೀ ನಷ್ಟು ದೂರವಿದೆ. ಪಟೇಲ್ ಕೊಲೆಯಾದ 10 ನಿಮಿಷಗಳ ಮುಂಚೆಯಷ್ಟೆ ಅಂಗಡಿಯಿಂದ ಹೊರಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕಾನ್ಸಾಸ್‍ನಲ್ಲಿ ಶ್ರೀನಿವಾಸ್ ಅವರ ಹತ್ಯೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಆದರೆ ಇದು ಜನಾಂಗೀಯ ಕಾರಣದಿಂದ ಅಥವಾ ಅವರು ಭಾರತೀಯರೆಂಬ ಕಾರಣಕ್ಕೆ ನಡೆದಿರುವ ಕೊಲೆಯಾಗಿರಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಇಲ್ಲಿನ ಪೊಲೀಸರು ಹೇಳಿದ್ದಾರೆ.

ಪಟೇಲ್ ಅವರ ನಿಧನದ ಸುದ್ದಿ ಕೇಳಿ ಸ್ನೇಹಿತರು ಹಾಗೂ ಗ್ರಾಹಕರು ಶಾಕ್ ಆಗಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಪಟೇಲ್ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಪಟೇಲ್ ಅವರು ಒಳ್ಳೆಯ ವ್ಯಕ್ತಿಯಾಗಿದ್ರು. ಅವರು ಉದ್ಯಮದಲ್ಲಿ ಕೇವಲ ಲಾಭಕ್ಕಾಗಿ ಯೋಚಿಸುತ್ತಿರಲಿಲ್ಲ. ಯಾರ ಬಳಿಯಾದ್ರೂ ಹಣವಿಲ್ಲವೆಂದರೆ ಅವರಿಗೆ ಊಟ ಕೊಡುತ್ತಿದ್ದರು. ಅಂತಹವರಿಗೆ ಯಾರು ತಾನೆ ಈ ರೀತಿ ಮಾಡ್ತಾರೆ ಅಂತ ಗ್ರಾಹಕ ನಿಕೋಲ್ ಜೋನ್ಸ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಪಟೇಲ್ ಅವರ ಹತ್ಯೆಗೆ ಲ್ಯಾಂಕ್ಯಾಸ್ಟರ್‍ನಲ್ಲಿ ಆಕ್ರೋಶ ವ್ಯಕ್ತವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪಟೇಲ್ ಅವರು ಪತ್ನಿ ಹಾಗೂ ಪ್ರಾಥಮಿಕ ಶಲೆಯಲ್ಲಿ ಓದುತ್ತಿರುವ ಮಗುವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *