Wednesday, 21st March 2018

Recent News

ಸಿಎಂ ಹುಬ್ಲೋಟ್ ವಾಚ್ ಆಯ್ತು, ಇದೀಗ ಸಚಿವ ರಾಯರೆಡ್ಡಿ ಸರದಿ – 3 ಲಕ್ಷ ಮೌಲ್ಯದ ವಾಚ್ ಕಟ್ಟಿದ ಮಂತ್ರಿ

ಕೊಪ್ಪಳ: ಈ ಹಿಂದೆ ಸಿಎಂ ಸಿದ್ದರಾಮಯ್ಯ ಹುಬ್ಲೋಟ್ ವಾಚ್ ಧರಿಸಿ ಸಖತ್ ಸುದ್ದಿಯಾಗಿದ್ರು. ಇದೀಗ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ರಾಯರೆಡ್ಡಿ ದುಬಾರಿ ಬೆಲೆಯ ವಾಚ್ ಧರಿಸುವ ಮೂಲಕ ಸುದ್ದಿಯಾಗಿದ್ದಾರೆ.

ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬರುವ ಮುನ್ನ ರಾಯರೆಡ್ಡಿ, ಅಂದಾಜು 3 ಲಕ್ಷ ರೂಪಾಯಿ ಬೆಲೆಯ ಒಮೇಗಾ ಸಿ ಮಾಸ್ಟರ್ ಕಂಪೆನಿಯ ವಾಚ್ ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಯಲಬುರ್ಗಾ ಕ್ಷೇತ್ರದಲ್ಲಿ ಜನ ಮೂಲಭೂತ ಸೌಕರ್ಯಗಳಿಂದ ವಂಚಿತರಾದ್ರೂ ರಾಯರೆಡ್ಡಿ ಮಾತ್ರ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ.

ಸಚಿವರು ಈ ವಾಚ್ ಖರೀದಿಸಿದ್ರಾ ಅಥವಾ ಯಾರಾದರೂ ಗಿಫ್ಟ್ ಕೊಟ್ಟಿದ್ದಾರೋ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇಷ್ಟು ದುಬಾರಿ ಬೆಲೆಯ ವಾಚ್ ಕಟ್ಟುವುದು ನೋಡಿದ್ರೆ ಬಸವರಾಜ್ ರಾಯರೆಡ್ಡಿ ಅವರು ರಾಯಲ್ ಲೈಫ್ ನಡೆಸುತ್ತಿದ್ದಾರೆ ಅನ್ನೋದು ಮಾತ್ರ ಸ್ಪಷ್ಟವಾಗುತ್ತದೆ.

ಈ ಮೊದಲು ಸಿಎಂ ಸಿದ್ದರಾಮಯ್ಯ ಬೆಲೆ ಬಾಳುವ ಹುಬ್ಲೋಟ್ ವಾಚ್ ಧರಿಸಿದ್ದು, ಸಾಕಷ್ಟು ವಿವಾದವನ್ನು ಹುಟ್ಟಿ ಹಾಕಿತ್ತು. ಸಮಾಜವಾದಿ ಅಂತಾ ಹೇಳುತ್ತಾ ಮುಖ್ಯಮಂತ್ರಿಗಳು ದುಬಾರಿ ಬೆಲೆಯ ವಾಚ್ ಕಟ್ತಾರೆ ಅಂತಾ ವಿರೋಧ ಪಕ್ಷಗಳು ಟೀಕಿಸಿದ್ದವು. ವಾಚ್ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಒಳಗಾಗುತ್ತಿದ್ದಂತೆ ಸಿಎಂ ವಾಚ್ ಸರ್ಕಾರದ ವಶಕ್ಕೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ಅಂತ್ಯ ಹಾಡಿದ್ದರು.

Leave a Reply

Your email address will not be published. Required fields are marked *