Thursday, 24th May 2018

ಬೆಳ್ಳಂಬೆಳಗ್ಗೆ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಗಂಡನಿಗೆ ಕಬ್ಬಿಣದ ರಾಡ್ ನಿಂದ ಥಳಿಸಿದ ಪತ್ನಿ!

ಹಾಸನ: ಪರನಾರಿ ಸಹವಾಸ ಮಾಡಿದ ಪತಿ ಮಹಾಶಯನಿಗೆ ಪತ್ನಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹಾಸನದ ಗಂಡಸಿ ಹ್ಯಾಂಡ್‍ ಪೋಸ್ಟ್ ನಲ್ಲಿ ನಡೆದಿದೆ. ಗಂಡ ಸತೀಶ್ ಮತ್ತೊಬ್ಬ ಹೆಂಗಸಿನ ಸಹವಾಸ ಮಾಡಿದ್ದು, ಪತ್ನಿ ರುಕ್ಮಿಣಿ ಬೆಳ್ಳಂಬೆಳಗ್ಗೆಯೇ ಗಂಡನ ಅಂಗಡಿಗೆ ನುಗ್ಗಿ ಚೆನ್ನಾಗಿ ಬಾರಿಸಿದ್ದಾರೆ. ಅಂಗಡಿಯಲ್ಲಿದ್ದ ರಾಡ್ ತೆಗೆದುಕೊಂಡು ಒಂದೆರಡು ಏಟು ಹೊಡೆದಿದ್ದಾರೆ. ಮದುವೆ ವಯಸ್ಸಿನ ಮಕ್ಕಳಿದ್ರೂ ಇನ್ನೊಬ್ಬಳ ಸಹವಾಸ ಬೇಕಾ ಅಂತಾ ಮಂಗಳಾರತಿ ಮಾಡಿದ್ದಾರೆ.

ಹಾರ್ಡ್ ವೇರ್ ಅಂಗಡಿ ಇಟ್ಟುಕೊಂಡಿರೋ ಸತೀಶ್ ತನ್ನ ಸ್ನೇಹಿತನ ಪತ್ನಿಯೊಂದಿಗೆ ಲವ್ವಿ ಡವ್ವಿ ಇಟ್ಟುಕೊಂಡಿದ್ದ. ಗಂಡಸಿ ನಿವಾಸಿಯಾದ ಈತ ಪಕ್ಕದ ಮನೆಯ ಮಂಜುಳಾಳನ್ನ ಕರೆದುಕೊಂಡು ಎಸ್ಕೇಪ್ ಆಗಿದ್ದ. ಸತೀಶ್ ಮತ್ತು ಮಂಜುನಾಥ್ ಕುಟುಂಬಗಳು ಒಂದೇ ಬಡಾವಣೆಯ ಅಕ್ಕ ಪಕ್ಕದಲ್ಲಿ ವಾಸವಾಗಿದ್ದವು. ಮಂಜುನಾಥ್ ಪತ್ನಿ ಮಂಜುಳಾ ಮೇಲೆ ಕಣ್ಣು ಹಾಕಿದ ಸತೀಶ್, ಆಕೆಯೊಂದಿಗೆ ಸಂಬಂಧವನ್ನೂ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇಬ್ಬರ ಅಕ್ರಮ ಸಂಬಂಧದ ವಿಷಯ ಉಳಿದವರಿಗೆ ತಿಳಿದು, ಬುದ್ಧಿವಾದ ಸಹ ಹೇಳಿದ್ದು ಆಗಿದೆ. ಆದರೂ ತಮ್ಮ ತಪ್ಪು ತಿದ್ದುಕೊಳ್ಳದೇ ಇಬ್ಬರೂ ಕಳೆದ ಮೇ ನಲ್ಲಿ ಪರಾರಿಯಾಗಿ ಮೈಸೂರಿನಲ್ಲಿ ವಾಸವಾಗಿದ್ದಾರೆ.

ಸತೀಶ್ ಮೈಸೂರಿನಲ್ಲಿ ವಾಸ ಮಾಡುತ್ತಿದ್ರೂ ಅಲ್ಲಿಂದಲೇ ಬಂದು ಗಂಡಸಿಯಲ್ಲೇ ಹಾರ್ಡ್ ವೇರ್ ಅಂಗಡಿಯನ್ನ ನಡೆಸಿಕೊಂಡು ಹೋಗುತ್ತಿದ್ದಾನೆ. ವಿಪರ್ಯಾಸ ಅಂದ್ರೆ ಓಡಿ ಹೋಗಿರುವ ಸತೀಶ್ ಮತ್ತು ಮಂಜುಳಾಗೆ 40 ವರ್ಷ ದಾಟಿದ್ದು, ಪ್ರಾಯಕ್ಕೆ ಬಂದಿರುವ ಇಬ್ಬರು ಮಕ್ಕಳಿದ್ದಾರೆ. ಮಂಜುಳಾ ಹೋಗುವಾಗ ತನ್ನಿಬ್ಬರು ಗಂಡು ಮಕ್ಕಳನ್ನೂ ಕರೆದುಕೊಂಡು ಹೋಗಿ, ಇದೀಗ ವಿಚ್ಛೇದನ ಬೇಕು ಅಂತ ಗಂಡನಿಗೆ ನೋಟಿಸ್ ಕಳಿಸಿದ್ದಾಳೆ. ಈ ಸಂಬಂಧ ಗಂಡಸಿ ಪೊಲೀಸರಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.

27 ವರ್ಷ ನನ್ನೊಂದಿಗೆ ಸಂಸಾರ ನಡೆಸಿ ಈಗ ಪರ ಪುರುಷನೊಂದಿಗೆ ಓಡಿ ಹೋಗಿರುವ ಪತ್ನಿಗೆ ತಕ್ಕ ಶಾಸ್ತಿಯಾಗಬೇಕು ಎಂಬುದು ಮಂಜುನಾಥ್ ಒತ್ತಾಯವಾಗಿದೆ. ಇನ್ನೊಂದೆಡೆ ಇಬ್ಬರು ಮಕ್ಕಳು ಒಂದೊಂದು ಕಡೆ ಓದುತ್ತಿದ್ದಾರೆ. ನಾನು ಬಾಡಿಗೆ ಮನೆಯಲ್ಲಿದ್ದು, ಸಂಸಾರ ನಡೆಸೋದು ದುಸ್ತರವಾಗುತ್ತಿದೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಅಂತಾ ಸತೀಶ್ ಪತ್ನಿ ರುಕ್ಮಿಣಿ ಅಳಲನ್ನ ತೋಡಿಕೊಳ್ತಾ ಇದ್ದಾರೆ.

 

 

Leave a Reply

Your email address will not be published. Required fields are marked *