Thursday, 24th May 2018

ಕಳಚಿತು ಸಿನಿಮಾ ರಂಗದ ಕೊಂಡಿ – ಪಂಚಭೂತಗಳಲ್ಲಿ ಕಾಶಿನಾಥ್ ಲೀನ

ಬೆಂಗಳೂರು: ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿದೆ. ನಾಲ್ಕು ದಶಕಗಳಿಗೂ ಹೆಚ್ಚು ಬಣ್ಣದ ಲೋಕದಲ್ಲಿ ಮಿಂದೆದ್ದಿದ್ದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರ, ಪ್ರಯೋಗಾತ್ಮಕ ಚಿತ್ರಗಳ ಅದ್ಭುತ ಪ್ರತಿಭೆ ಕಾಶಿನಾಥ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

ಚಾಮರಾಜಪೇಟೆಯ ಟಿಆರ್ ಮಿಲ್‍ನ ರುದ್ರಭೂಮಿಯಲ್ಲಿ ರಾತ್ರಿ 8 ಗಂಟೆಗೆ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯ್ತು. ಮಗ ಅಭಿಮನ್ಯು ಕಾಶಿನಾಥ್ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶಿಸಿದರು.

ರಕ್ತಕಣಗಳಿಗೆ ಸಂಬಂಧಿಸಿದ್ದ ಹಾರ್ಟ್ ಸ್ಕಿಲ್ಸ್ ಲಿಂಕ್-4 ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಕಾಶಿನಾಥ್ ಏಳು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ರು. ಆದ್ರೆ, ಒಂದು ತಿಂಗಳ ಹಿಂದೆ ಚಿಕಿತ್ಸೆ ಮುಗಿದಿತ್ತು.

ಕಳೆದ 2 ದಿನಗಳ ಹಿಂದೆ ಮತ್ತೆ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಉಸಿರಾಟ, ಕಫಾದಿಂದ ತೀವ್ರವಾಗಿ ಬಳಲುತ್ತಿದ್ದರು. ಡಾ. ಶೇಖರ್ ಪಾಟೀಲ್ ಚಿಕಿತ್ಸೆ ಕೊಡ್ತಿದ್ರು. ಆದ್ರೆ, ಇವತ್ತು ಬೆಳಗ್ಗೆ 7.15ರ ಸುಮಾರಿಗೆ ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಕಾಶಿನಾಥ್‍ಗೆ ಅಲೋಕ್, ಅಮೃತವರ್ಷಿಣಿ ಇಬ್ಬರು ಮಕ್ಕಳಿದ್ದಾರೆ. ಪುತ್ರಿ ಅಮೃತ ದುಬೈನಿಂದ ಆಗಮಿಸಿದ್ರು. ಹಿರಿಯ ಕಲಾವಿದ ಅಗಲಿಗೆ ಸುದ್ದಿ ಕೇಳಿದಾಕ್ಷಣ ಚಿತ್ರರಂಗ ದಿಗ್ಭ್ರಮೆಯಿಂದ ಶೋಕಸಾಗರದಲ್ಲಿ ಮುಳುಗಿತು. ಕಾಶಿನಾಥ್ ಇದ್ದ ಆಸ್ಪತ್ರೆ, ಬಸವನಗುಡಿಯ ಎಪಿಎಸ್ ಕಾಲೇಜ್ ಮೈದಾನದಲ್ಲಿ ಅಂತಿಮ ನಮನ ಸಲ್ಲಿಸಲಾಯ್ತು. ನಂತರ ಜಯನಗರದ ಅವರ ನಿವಾಸದ ಬಳಿ ಸ್ವಲ್ಪ ಹೊತ್ತು ಇರಿಸಿಲಾಗಿತ್ತು. ಕಾಶಿನಾಥ್ ಕುಟುಂಬಕ್ಕೆ ಗಣ್ಯರು ಸಾಂತ್ವನ ಹೇಳಿದ್ರು.

Leave a Reply

Your email address will not be published. Required fields are marked *