ಎಸಿಬಿ ದಾಳಿಯಲ್ಲಿ ಕರ್ನಲ್ ಕರಿಯಪ್ಪ ಮನೆಯಲ್ಲಿ ಸಿಕ್ಕ 7 ಸಾವಿರ ಸೀರೆಗಳ ರಹಸ್ಯ ಬಯಲು

– ಕರಿಯಪ್ಪ ಆಸ್ತಿ ಕಂಡು ಅಧಿಕಾರಿಗಳು ಶಾಕ್

ಹುಬ್ಬಳ್ಳಿ: ಮಂಗಳವಾರದಂದು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಕರಿಯಪ್ಪ ಮನೆಯಲ್ಲಿ ಸಿಕ್ಕ 7 ಸಾವಿರ ಸೀರೆಗಳ ರಹಸ್ಯ ಬಯಲಾಗಿದೆ.

ಕರ್ನಲ್ ಅವರ ಪತ್ನಿಗೆ ವಿಪರೀತ ಸೀರೆ ಹುಚ್ಚಂತೆ. ಹೀಗಾಗಿ ಕರಿಯಪ್ಪ ಪತ್ನಿ ಕಮಲಾ ಅಲಿಯಾಸ್ ಶಾಂತಾ ರಾಜ್ಯದ ನಾನಾ ಭಾಗಗಳ ಸುಪ್ರಸಿದ್ಧ ಸೀರೆಯ ಮಳಿಗೆಯಲ್ಲಿ ಸೀರೆಯನ್ನು ಖರೀದಿ ಮಾಡುತ್ತಿದ್ರು. ಪ್ರತಿ ಶಾಪಿಂಗ್‍ನಲ್ಲೂ ಕನಿಷ್ಠ ಪಕ್ಷ ನೂರಕ್ಕೂ ಹೆಚ್ಚು ಸೀರೆಗಳನ್ನು ಖರೀದಿ ಮಾಡ್ತಿದ್ರು ಎಂದು ತಿಳಿದು ಬಂದಿದೆ.

ಕರ್ನಲ್ ಕರಿಯಪ್ಪ ಮನೆ ಮೇಲೆ ಮಂಗಳವಾರದಂದು ಎಬಿಸಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯಲ್ಲಿ ಅಪಾರ ಪ್ರಮಾಣದ ಅಸ್ತಿ ಪಾಸ್ತಿ ಜೊತೆ ಸಾವಿರಾರು ರೇಷ್ಮೇ ಸೀರೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಸುಮಾರು ಎರಡು ಕೊಠಡಿಗಳಲ್ಲಿ ಸಂಗ್ರಹಿಸಿಟ್ಟಿದ್ದ ಸೀರೆಗಳನ್ನು 10 ಜನ ಅಧಿಕಾರಿಗಳು ಎಣಿಸಿದ್ದು, 7 ಸಾವಿರ ಸೀರೆಗಳು ಪತ್ತೆಯಾಗಿದ್ದವು. ಕರಿಯಪ್ಪ ಅವರ ಮನೆಯಲ್ಲಿ ದೊರೆತ ಒಂದೊಂದು ಸೀರೆಯ ಬೆಲೆ ಅಂದಾಜು 10 ರಿಂದ 15 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದೆ.

ಕರಿಯಪ್ಪ ಹುಬ್ಬಳ್ಳಿ ನಗರದಲ್ಲಿ ಎರಡು ಬಂಗಲೆ, ಬೆಂಗಳೂರಿನಲ್ಲಿ ಎರಡು ಮನೆ ಮತ್ತು ನೆಲಮಂಗಲದ ಬಳಿ ಒಂದು ಫ್ಲಾಟ್ ಹೊಂದಿದ್ದಾರೆ. ಅಪಾರ ಪ್ರಮಾಣದ ಕೃಷಿ ಭೂಮಿ, ವಿವಿಧೆಡೆ ನಿವೇಶನಗಳನ್ನು ಹೊಂದಿದ್ದು ಪತ್ತೆಯಾಗಿದೆ. ಕರಿಯಪ್ಪರ ಇಬ್ಬರು ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮನೆಯಲ್ಲಿ 7.50 ಲಕ್ಷ ನಗದು ಹಾಗೂ ಕಚೇರಿಯಲ್ಲಿ 1.30 ಲಕ್ಷ ನಗದು ಹಣ ದೊರೆತಿದೆ.

ಕರಿಯಪ್ಪ ಮನೆ ಮೇಲಿನ ದಾಳಿ ಬಳಿಕ ಅವರ ಸಂಬಂಧಿಕರು, ಸ್ನೇಹಿತರ ಮನೆಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಕಾಂಗ್ರೆಸ್ ಮುಂಖಡ ಪ್ರಸಾದ್ ಅಬ್ಬಯ್ಯ ನಿಕಟವರ್ತಿ ನಿರಂಜನ್ ದೇಸಾಯಿ ಮನೆಯಲ್ಲಿ ಕರ್ನಲ್ ಕರಿಯಪ್ಪಗೆ ಸೇರಿದ 2 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ದಾಖಲೆಗಳು ಪತ್ತೆಯಾಗಿದೆ.

ಇಂದು ಕೂಡ ಕರ್ನಲ್ ಕರಿಯಪ್ಪ ಅವರ ಮನೆಯಲ್ಲಿ ಶೋಧ ಮುಂದುವರೆಯಲಿದೆ. ಇಂದು ಕರ್ನಲ್ ಕರಿಯಪ್ಪ ಅವರ ಬ್ಯಾಂಕ್ ಲಾಕರ್‍ಗಳನ್ನು ಅಧಿಕಾರಿಗಳು ಹೊರ ತೆಗೆಯಲಿದ್ದಾರೆ. ಕರ್ನಲ್ ಅವರು ಹತ್ತಕ್ಕೂ ಹೆಚ್ಚು ಬ್ಯಾಂಕ್‍ಗಳಲ್ಲಿ ಅಕೌಂಟ್ ಹೊಂದಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ಇಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

 

You might also like More from author

Leave A Reply

Your email address will not be published.

badge