Monday, 18th June 2018

Recent News

ಟೆಸ್ಟ್, ಏಕದಿನದಲ್ಲಿ ಕ್ಲೀನ್ ಸ್ವೀಪ್‍ನೊಂದಿಗೆ ಲಂಕಾ ದಹನ: ಭಾರತಕ್ಕೆ 6 ವಿಕೆಟ್‍ಗಳ ಭರ್ಜರಿ ಜಯ

ಕೊಲಂಬೋ: ಶ್ರೀಲಂಕಾ ವಿರುದ್ಧ ನಡೆದ ಮೂರು ಟೆಸ್ಟ್ ಪಂದ್ಯಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿದ್ದ ಭಾರತ ಐದು ಪಂದ್ಯಗಳ ಮೈಕ್ರೋಮ್ಯಾಕ್ಸ್ ಸರಣಿಯನ್ನು ಗೆಲ್ಲುವ ಮೂಲಕ ಏಕದಿನದಲ್ಲೂ ಕ್ಲೀನ್ ಸ್ವೀಪ್ ಸಾಧಿಸಿದೆ.

ಕೊನೆಯ ಪಂದ್ಯವನ್ನು ಗೆಲ್ಲಲು 239 ರನ್ ಗಳ ಗುರಿಯನ್ನು ಪಡೆದ ಭಾರತ ಕೊಹ್ಲಿಯ ಅಜೇಯ ಶತಕ, ಕೇದಾರ್ ಜಾಧವ್ ಅರ್ಧಶತಕದಿಂದಾಗಿ 46.3 ಓವರ್‍ಗಳಲ್ಲಿ 239 ರನ್ ಗಳಿಸಿ 6 ವಿಕೆಟ್ ಗಳಿಂದ ಜಯಗಳಿಸಿತು.

29 ರನ್ ಗಳಿಸುವಷ್ಟರಲ್ಲೇ ರಹಾನೆ ಮತ್ತು ರೋಹಿತ್ ಶರ್ಮಾ ಔಟಾಗುವ ಮೂಲಕ ಭಾರತ ಆರಂಭಿಕ ಕುಸಿತ ಕಂಡಿತ್ತು. ಆದರೆ ಮೂರನೇ ವಿಕೆಟ್ ಗೆ ಮನೀಶ್ ಪಾಂಡೆ ಮತ್ತು ಕೊಹ್ಲಿ 99 ರನ್ ಜೊತೆಯಾಟವಾಡುವ ಮೂಲಕ ಕುಸಿತದಿಂದ ಪಾರು ಮಾಡಿದರು. ನಾಲ್ಕನೇ ವಿಕೆಟ್ ಗೆ ಕೊಹ್ಲಿ ಮತ್ತು ಕೇದಾರ್ ಜಾಧವ್ 109 ರನ್ ಪೇರಿಸಿ ವಿಜಯದ ಸನಿಹ ಭಾರತವನ್ನು ತಂದಿದ್ದರು. 52 ಎಸೆತಗಳಿಗೆ ಅರ್ಧಶತಕ ಹೊಡೆದ ಜಾಧವ್ ವಿಜಯಕ್ಕೆ ಎರಡು ರನ್ ಬೇಕಿದ್ದಾಗ 63 ರನ್ (73 ಎಸೆತ, 7 ಬೌಂಡರಿ) ಗಳಿಸಿ ಕ್ಯಾಚ್ ನೀಡಿ ಔಟಾದರು.

53 ಎಸೆತಗಳಿಗೆ 50 ರನ್ ಹೊಡೆದ ಕೊಹ್ಲಿ 107 ಎಸೆತದಲ್ಲಿ ಶತಕ ಹೊಡೆದದರು. ಅಂತಿಮವಾಗಿ 110 ರನ್( 116 ಎಸೆತ, 9 ಬೌಂಡರಿ) ಹೊಡೆದು ಅಜೇಯರಾಗಿ ಉಳಿದರೆ, ನಾಟೌಟ್ ನಲ್ಲಿ ವಿಶ್ವ ದಾಖಲೆ ಬರೆದಿರುವ ಧೋನಿ 1 ರನ್ ಗಳಿಸಿ ಅಜೇಯರಾಗಿ ಉಳಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಲಂಕಾ ಪರವಾಗಿ ತಿರುಮನೆ 67 ರನ್, ಏಂಜಲೋ ಮಾಥ್ಯೂಸ್ 55 ರನ್, ನಾಯಕ ಉಪುಲ್ ತರಂಗ 48 ರನ್ ಹೊಡೆದರು.

ಭುವನೇಶ್ವರ್ ಕುಮಾರ್ ಇದೇ ಮೊದಲ ಬಾರಿಗೆ 5 ವಿಕೆಟ್ ಪಡೆದರೆ, ಜಸ್ ಪ್ರೀತ್ ಬೂಮ್ರಾ 2 ವಿಕೆಟ್ ಕಿತ್ತರು. ಕುಲದೀಪ್ ಯಾದವ್ ಮತ್ತು ಚಹಲ್ ತಲಾ ಒಂದೊಂದು ವಿಕೆಟ್ ಪಡೆದರು.

ಕೊಹ್ಲಿ ಸಾಧನೆ: 2017ರಲ್ಲಿ 1 ಸಾವಿರ ರನ್ ಪೂರ್ಣಗೊಳಿಸಿದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೇ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಶತಕದ ಸಾಧನೆ ಸರಿಗಟ್ಟಿದ್ದಾರೆ. ಪಾಟಿಂಗ್ 375 ಪಂದ್ಯಗಳಿಂದ 30 ಶತಕ ಹೊಡೆದಿದ್ದರೆ, ಕೊಹ್ಲಿ 194 ಪಂದ್ಯಗಳಿಂದ ಈ ಸಾಧನೆ ಮಾಡಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 463 ಪಂದ್ಯಗಳಿಂದ 49 ಶತಕ ಸಿಡಿಸುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ಲಂಕಾ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ ಸತತ ಎರಡನೇ ಬಾರಿ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದೆ. 2014ರಲ್ಲಿ ಭಾರತದಲ್ಲಿ ನಡೆದಿದ್ದ ಸರಣಿಯಲ್ಲಿ ಶ್ರೀಲಂಕಾ 5 ಪಂದ್ಯಗಳನ್ನು ಸೋತಿತ್ತು. ಇದಾದ ಬಳಿಕ ಭಾರತ ಏಕದಿನದಲ್ಲಿ ಯಾವೊಂದು ತಂಡದ ವಿರುದ್ಧ ಈ ವಿಶೇಷ ಸಾಧನೆ ಮಾಡಿರಲಿಲ್ಲ.

ಮೊದಲ ಏಕದಿನವನ್ನು 9 ವಿಕೆಟ್ ಗಳಿಂದ ಗೆದ್ದಿದ್ದರೆ, ಎರಡನೇ ಪಂದ್ಯವನ್ನು 3 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. 6 ವಿಕೆಟ್ ಗಳಿಂದ ಮೂರನೇ ಪಂದ್ಯವನ್ನು ಗೆದ್ದಿದ್ದ ಭಾರತ ನಾಲ್ಕನೇಯ ಏಕದಿನವನ್ನು 168 ರನ್ ಗಳಿಂದ ಗೆದ್ದುಕೊಂಡಿತ್ತು.

ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 304 ರನ್ ಗಳಿಂದ ಗದ್ದಿದ್ದರೆ, ಎರಡನೇ ಪಂದ್ಯವನ್ನು ಒಂದು ಇನ್ನಿಂಗ್ಸ್ ಮತ್ತು 171 ರನ್ ಗಳಿಂದ ಗೆದ್ದುಕೊಂಡಿತ್ತು. ಮೂರನೇ ಪಂದ್ಯವನ್ನು 9 ವಿಕೆಟ್ ಗಳಿಂದ ಗೆದ್ದುಕೊಳ್ಳುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.

ಇದನ್ನೂ ಓದಿ: ಏಕದಿನ ಕ್ರಿಕೆಟ್‍ನಲ್ಲಿ ಧೋನಿಯಿಂದ ಮತ್ತೊಂದು ವಿಶ್ವದಾಖಲೆ!

 

Leave a Reply

Your email address will not be published. Required fields are marked *