ಸ್ನಾನಕ್ಕೆ ಹೊಳೆಗೆ ಇಳಿದ ಒಂದೇ ಕುಟುಂಬದ ನಾಲ್ವರ ದುರ್ಮರಣ

ಮಂಗಳೂರು: ಸ್ನಾನಕ್ಕೆಂದು ಹೊಳೆಗೆ ಇಳಿದ ಒಂದೇ ಕುಟುಂಬದ ನಾಲ್ಕು ಮಂದಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕಾಪು ನಿವಾಸಿಗಳಾದ ಒಂದೇ ಕುಟುಂಬದ ರಹೀಮ್(30), ಪತ್ನಿ ರುಬೀನಾ(25), ಯಾಸ್ಮಿನ್(23) ಹಾಗೂ ಸುಬಾನ್(15) ಮೃತಪಟ್ಟವರು. ನದಿಯಲ್ಲಿ ಮುಳುಗುತ್ತಿದ್ದ ಮೈಮೂನಾ ಎಂಬ ಮಹಿಳೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಇಂದು ಬೆಳಿಗ್ಗೆ ಇತಿಹಾಸ ಪ್ರಸಿದ್ಧ ಕಾಜೂರು ದರ್ಗಾಕ್ಕೆ ಭೇಟಿ ನೀಡಿದ್ದ ಕುಟುಂಬ ಸದಸ್ಯರು ಭೇಟಿ ಬಳಿಕ ಹೊಳೆಗೆ ಸ್ನಾನಕ್ಕೆ ಇಳಿದಿದ್ದರು. ಹೊಳೆಯಲ್ಲಿ ಆಳದ ತೀವ್ರತೆ ಗಮನಿಸದೆ ಸ್ನಾನಕ್ಕೆ ಇಳಿದಿದ್ದರಿಂದ ದುರ್ಘಟನೆ ಸಂಭವಿಸಿದೆ.

ಮಹಿಳೆಯ ಕಿರುಚಾಟ ಕೇಳಿ ಸ್ಥಳೀಯರು ಓಡಿ ಬಂದು ರಕ್ಷಣೆ ಮಾಡಿದ್ದು ನಾಲ್ವರ ಮೃತದೇಹ ಪತ್ತೆಯಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ.

LEAVE A REPLY