11ನೇ ವಯಸ್ಸಿಯಲ್ಲೇ 63% ಅಂಕಗಳೊಂದಿಗೆ 12ನೇ ತರಗತಿ ಪಾಸ್ ಮಾಡಿದ ಪೋರ

ಹೈದರಾಬಾದ್: ಸಾಧನೆಗೆ ವಯಸ್ಸಿನ ಹಂಗಿಲ್ಲ ಅನ್ನೋದಕ್ಕೆ ಹೈದರಬಾದ್ ನ ಈ ಬಾಲಕ ನೈಜ ಉದಾಹರಣೆ. ನಗರದ 11 ವರ್ಷದ ಪೋರನೊಬ್ಬ 12ನೇ ತರಗತಿ ಪರೀಕ್ಷೆ ಬರೆದು ಪಾಸಾಗಿದ್ದಾನೆ.

ಅಗಸ್ತ್ಯ ಜೈಶ್ವಾಲ್ 12ನೇ ತರಗತಿ ಪರೀಕ್ಷೆ ಬರೆದ ಬಾಲಕನಾಗಿದ್ದಾನೆ. ಪರೀಕ್ಷೆಯಲ್ಲಿ ಈತ ಶೇ. 63ರಷ್ಟು ಅಂಕ ಪಡೆದು ಉತ್ತೀರ್ಣನಾಗಿದ್ದಾನೆ. ಈ ಮೂಲಕ ರಾಜ್ಯದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ 12ನೇ ತರಗತಿ ಪಾಸು ಮಾಡಿದ ಮೊದಲ ಬಾಲಕ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ ಅಂತಾ ಬಾಲಕನ ತಂದೆ ಅಶ್ವಾನಿ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ಬರೆದ 11ರ ಪೋರ!

ಅಗಸ್ತ್ಯ ತನ್ನ 9ನೇ ವಯಸ್ಸಿಗೆ 2015ರಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ ಹಾಗೂ 12ನೆ ತರಗತಿ ಪರೀಕ್ಷೆ ಬರೆಯಲು ತೆಲಂಗಾಣ ಎಸ್‍ಎಸ್‍ಸಿ ಬೋರ್ಡ್‍ನಿಂದ ಅನುಮತಿ ಪಡೆದಿದ್ದ.

12ನೇ ತರಗತಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿ ತನ್ನ ವಿಷಯ, ಬೋಧನೆಯ ಮಾಧ್ಯಮ ಹಾಗೂ ಎರಡನೇ ವಿಷಯದ ಬಗ್ಗೆ ಮಾಹಿತಿ ನೀಡಬೇಕು. ವಯಸ್ಸಿನ ಬಗ್ಗೆ ಮಾಹಿತಿ ಅಗತ್ಯವಿಲ್ಲ ಎಂದು ಮಧ್ಯಂತರ ಶಿಕ್ಷಣ ಮಂಡಳಿಯ ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: 16 ವರ್ಷದ ಈಕೆ ಈಗ ಏಷ್ಯಾದಲ್ಲೇ ಅತ್ಯಂತ ಕಿರಿಯ ಸ್ನಾತಕೋತ್ತರ ಪದವೀಧರೆ

ಅಗಸ್ತ್ಯ ಜೈಶ್ವಾಲ್, ಯೂಸುಫ್‍ಗಢದ ಸೆಂಟ್ ಮೇರಿಸ್ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಮಾರ್ಚ್‍ನಲ್ಲಿ 12ನೇ ತರಗತಿ ಪರೀಕ್ಷೆ ಬರೆದಿದ್ದ. ಈ ಪರೀಕ್ಷೆಯ ಫಲಿತಾಂಶ ಭಾನುವಾರದಂದು ಪ್ರಕಟವಾಗಿದೆ. ಈತ ಹೈದರಾಬಾದ್‍ನಲ್ಲಿರೋ ಜುಬ್ಲಿ ಹಿಲ್ಸ್ ನ ಚೈತನ್ಯ ಜೂನಿಯರ್ ಕಲಾಶಾಲಾದಲ್ಲಿ ಪರೀಕ್ಷೆ ಬರೆದಿದ್ದನು. ಸಿವಿಕ್ಸ್, ಅರ್ಥಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ(ಕಾಮರ್ಸ್) ಈತನ ವಿಷಯಗಳಾಗಿತ್ತು.

ಆದ್ರೆ ಈತನ ಕುಟುಂಬದಲ್ಲಿ ಕಡಿಮೆ ವಯಸ್ಸಿನಲ್ಲೇ ಸಾಧನೆ ಮಾಡಿದವರಲ್ಲಿ ಅಗಸ್ತ್ಯ ಮೊದಲಿಗನಲ್ಲ. ಈತನ ಸಹೋದರಿಯಾದ ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ನೇಹಾ ಜೈಸ್ವಾಲ್ ಕೂಡ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪಿಎಚ್‍ಡಿಗೆ ದಾಖಲಾತಿ ಪಡೆದವರಾಗಿದ್ದಾರೆ.

ನೇಹಾ ಜೈಸ್ವಾಲ್ ತನ್ನ 15 ವಯಸ್ಸಿಗೆ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

You might also like More from author

Leave A Reply

Your email address will not be published.

badge